ರಾಷ್ಟ್ರೀಯ

75ರ ಅಜ್ಜಿಯ ಮೇಲೆ ಸೊಸೆಯ ದೌರ್ಜನ್ಯ: 5 ಲಕ್ಷಕ್ಕೂ ಹೆಚ್ಚು ಜನರಿಂದ ಫೇಸ್‌ಬುಕ್ ಪೋಸ್ಟ್‌ ವೀಕ್ಷಣೆ; ಸೊಸೆಯ ಬಂಧನ

Pinterest LinkedIn Tumblr


ಕೋಲ್ಕತ: ಸಾಮಾನ್ಯವಾಗಿ ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ವಿವಿಧ ವಿಡಿಯೋ ಮತ್ತು ಫೋಟೋಗಳನ್ನು ಜನರು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅಪರಾಧ ಕೃತ್ಯಗಳನ್ನು ಬಯಲಿಗೆಳೆಯುವಲ್ಲಿಯೂ ಈ ಪೋಸ್ಟ್‌ಗಳು ನೆರವಾಗುತ್ತವೆ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಇಂತಹುದೇ ಮಾದರಿಯ ಅಪರಾಧ ಕೃತ್ಯವೊಂದು ಫೇಸ್‌ಬುಕ್ ಪೋಸ್ಟ್‌ ಮೂಲಕ ಬಯಲಿಗೆ ಬಂದಿದೆ.

ವಯಸ್ಸಾದ ಅತ್ತೆಯ ಮೇಲೆ ದೌರ್ಜನ್ಯ ಎಸಗುತ್ತಿದ್ದ ಸೊಸೆಯ ಕೃತ್ಯ ನೆರೆಮನೆಯ ಯುವಕನ ಮೊಬೈಲ್‌ನಲ್ಲಿ ಸೆರೆಯಾಗಿ ಆತನ ಗೆಳೆಯನ ಫೇಸ್‌ಬುಕ್ ಪೋಸ್ಟ್ ಮೂಲಕ ಪತ್ತೆಯಾಗಿದೆ. ಕೋಲ್ಕತದ ಗಾರಿಯಾದಲ್ಲಿನ ಬೋರಲ್‌ ಉತ್ತರ್‌ಪಾರಾದ ನಿವಾಸಿ 75 ವರ್ಷದ ಜಶೋದಾ ಪಾಲ್ ಎಂಬ ವೃದ್ಧೆಯ ಸೊಸೆ ಸ್ವಪ್ನ ಪಾಲ್ ಎಂಬಾಕೆ ದಿನವೂ ಅತ್ತೆಯ ಮೇಲೆ ದೌರ್ಜನ್ಯ ಎಸಗುತ್ತಿದ್ದಳು.

ಜಶೋದಾ ಪಾಲ್‌ ಅಮ್ನೇಶಿಯಾ ಪೀಡಿತರಾಗಿದ್ದು, ಒಮ್ಮೆ ಮನೆಯಂಗಳದಲ್ಲಿ ಸೊಸೆಯ ಅನುಮತಿಯಿಲ್ಲದೆ ಹೂವು ಕಿತ್ತಿದ್ದಕ್ಕೆ ಸೊಸೆ ಸ್ವಪ್ನ ಅವರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ವೃದ್ಧೆಯ ಮಗ ರಂಜಿತ್ ಪಾಲ್ ಇದನ್ನೆಲ್ಲಾ ನೋಡುತ್ತಿದ್ದರೂ ಸುಮ್ಮನಿದ್ದ. ಅಲ್ಲದೆ ಆತನ ಮಕ್ಕಳು ಕೂಡ ಈ ಬಗ್ಗೆ ಮಾತೆತ್ತಿರಲಿಲ್ಲ. ಪೊಲೀಸರಿಗೆ ದೂರು ನೀಡಲು ವೃದ್ಧೆ ಜಶೋದಾ ಪಾಲ್‌ಗೆ ಸಾಧ್ಯವಾಗುತ್ತಿರಲಿಲ್ಲ.

ಅಲ್ಲದೆ ನೆರೆಮನೆಯವರು ಯಾರೂ ಕೂಡ ಸಹಾಯ ಮಾಡಲಿಲ್ಲ. ಈ ಸಂದರ್ಭದಲ್ಲಿ ನೆರೆಮನೆಯ ಯುವಕ ಮೆಡಿಕಲ್ ರೆಪ್ರೆಸೆಂಟೇಟಿವ್‌ ಆಗಿದ್ದ ಸುಮನ್ ಎಂಬಾತ ವೃದ್ಧೆಗೆ ಸೊಸೆ ಹೊಡೆಯುತ್ತಿರುವುದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ನಂತರ ಅದನ್ನು ಗೆಳೆಯರಿಗೆ ಕಳುಹಿಸಿದ್ದ.

ಈ ವಿಡಿಯೋ ಪಡೆದುಕೊಂಡಿದ್ದ ಭೋಲಾರ್ ಬಜಾರ್‌ನ ಡಾ. ತರುಣ್ ಚಕ್ರವರ್ತಿ ಎಂಬವರು ರೋಂಟು ಸೇನ್‌ಗುಪ್ತ ಎಂಬವರಿಗೆ ಕಳುಹಿಸಿದ್ದರು. ರೋಂಟು ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದರು. ಈ ವಿಡಿಯೋವನ್ನು ನೋಡಿದ್ದ ಬಾಂದ್ರೋನಿ ಪೊಲೀಸ್ ಠಾಣೆಯ ಸುಭ್ರ ಚರ್ಕವರ್ತಿ ಗಮನಿಸಿ, ತಕ್ಷಣ ಕಾರ್ಯಪ್ರವೃತ್ತರಾದರು.

ವೃದ್ಧೆಯನ್ನು ರಕ್ಷಿಸುವ ಸಲುವಾಗಿ ತನಿಖೆ ಕೈಗೆತ್ತಿಕೊಂಡ ಅವರ ತಂಡ, ವಿವಿಧ ಹಂತದ ತನಿಖೆ ನಡೆಸಿ ಕೊನೆಗೂ ವಿಡಿಯೋದ ಮೂಲ ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಮಾಹಿತಿ ನೀಡಲು ಹಲವರು ಹಿಂದೆ ಸರಿದರೂ, ಕೊನೆಗೂ ವಿಡಿಯೋದಲ್ಲಿನ ಸ್ಥಳವನ್ನು ಗುರುತಿಸಿ ಅಜ್ಜಿಯನ್ನು ರಕ್ಷಿಸಿದ್ದಾರೆ. ಅತ್ತೆಯ ಮೇಲೆ ದೌರ್ಜನ್ಯ ಎಸಗಿದ ಸೊಸೆ ಸ್ವಪ್ನಳನ್ನು ಪೊಲೀಸರು ಬಂಧಿಸಿದ್ದಾರೆ.

ಹೀಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಆಗಿದ್ದ ಕೌಟುಂಬಿಕ ದೌರ್ಜನ್ಯದ ವಿಡಿಯೋ ಒಂದು ಪೊಲೀಸರ ಗಮನಕ್ಕೆ ಬಂದಿದ್ದರಿಂದ ವೃದ್ಧೆಯ ಜೀವ ಉಳಿದಿದೆ.

Comments are closed.