ರಾಷ್ಟ್ರೀಯ

ಮದುವೆಯಾಗಿದ್ದ ಯುವಕನೊಬ್ಬ ತನ್ನ ಪತ್ನಿಯನ್ನೇ ಪ್ರೀತಿಸುತ್ತಿದ್ದವನಿಗೆ ಧಾರೆ ಎರೆದ !

Pinterest LinkedIn Tumblr

ಕಾನ್ಪುರ: ಬಾಲಿವುಡ್‌ ಚಿತ್ರ ‘ಹಮ್‌ ದಿಲ್‌ ದೆ ಚುಕೆ ಸನಮ್‌’ ಚಿತ್ರವನ್ನು ನೆನೆಪಿಸುವಂತಿದೆ ಈ ಕಥೆ. ಮದುವೆಯಾಗಿದ್ದ ಯುವಕನೊಬ್ಬ ಪತ್ನಿ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದಾಳೆಂಬ ವಿಷಯ ತಿಳಿದ ಬಳಿಕ ಆಕೆಯನ್ನು ಪ್ರಿಯಕರನ ಜತೆ ಸೇರಿಸಲು ಮುಂದಾಗಿ ಅವರಿಬ್ಬರಿಗೂ ಮದುವೆ ಮಾಡಿಸಿದ್ದಾನೆ.

ಚಕೇರಿ ಪ್ರದೇಶದ ಸುಜಿತ್‌ಗೆ ಮದುವೆಯಾದ ಮೂರು ತಿಂಗಳ ಬಳಿಕ ಪತ್ನಿ ಶಾಂತಿಯು ರವಿ ಎಂಬವನನ್ನು ಪ್ರೀತಿಸುತ್ತಿದ್ದಾಳೆಂಬ ವಿಷಯ ತಿಳಿದಿದೆ. ಆಗ ಸುಜಿತ್‌ ಮುಂದೆ ನಿಂತು ಗೋಸಾಯ್‌ಗಂಜ್‌ನಲ್ಲಿ ಶಾಂತಿ ಮತ್ತು ರವಿಗೆ ಮದುವೆ ಮಾಡಿಸಿದ್ದಾನೆ.

ಫೆಬ್ರವರಿ ಹತ್ತೊಂಬತ್ತರಂದು ಸುಜಿತ್‌ ಮತ್ತು ಶಾಂತಿಯ ಮದುವೆ ಶ್ಯಾಮ್‌ ನಗರದಲ್ಲಿ ನಡೆದಿತ್ತು. ಮದುವೆಯಾಗಿ ಕೆಲವು ದಿನಗಳ ಬಳಿಕ ತವರಿಗೆ ಹೋದ ಶಾಂತಿ ತುಂಬ ದಿನಗಳಾದರೂ ಗಂಡನ ಮನೆಗೆ ವಾಪಸಾಗಿರಲಿಲ್ಲ. ಸುಜಿತ್‌ ಏಕೆ ಬರುತ್ತಿಲ್ಲ ಎಂದು ವಿಚಾರಿಸಿದಾಗ ಆಕೆ ಏನೂ ಹೇಳಲಿಲ್ಲ. ಕೆಲವು ದಿನ ಕಳೆದ ಬಳಿಕ ತಾನು ರವಿಯನ್ನು ಪ್ರೀತಿಸುತ್ತಿದ್ದು, ತನ್ನ ಇಷ್ಟಕ್ಕೆ ವಿರುದ್ಧವಾಗಿ ಈ ಮದುವೆ ನಡೆದಿರುವುದಾಗಿ ಪತಿ ಸುಜಿತ್‌ ಬಳಿ ಹೇಳಿಕೊಂಡಿದ್ದಾಳೆ.

ವಿಷಯ ತಿಳಿದ ಸುಜಿತ್‌ ಶಾಂತಿಯ ಪೋಷಕರ ಜತೆ ಮಾತನಾಡಿ ರವಿಯ ಜತೆ ಆಕೆಯ ಮದುವೆ ಮಾಡಿಸಲು ಒಪ್ಪಿಸಿದ್ದಾನೆ. ಅದರಂತೆ ಸಂಗಿವಾನ್‌ನಲ್ಲಿರುವ ಹನುಮಂತ ದೇಗುಲದಲ್ಲಿ ಎಲ್ಲ ಅತಿಥಿಗಳು, ಸಂಬಂಧಿಕರ ಎದುರಲ್ಲೇ ಅವರಿಬ್ಬರ ವಿವಾಹ ನೆರವೇರಿಸಿದ್ದಾನೆ.

ವಿಷಯ ತಿಳಿದ ಆರಂಭದಲ್ಲಿ ಇಬ್ಬರನ್ನೂ ಕೊಂದು ಬಿಡಬೇಕು ಎಂಬ ಆಲೋಚನೆಯೂ ಬಂದಿತ್ತು. ಹಾಗೆ ಮಾಡಿದ್ದರೆ ಮೂವರ ಬದುಕು ಕಮರಿ ಹೋಗುತ್ತಿತ್ತು. ಮೂವರ ಕುಟುಂಬವೂ ನೋವು ಅನುಭವಿಸಬೇಕಿತ್ತು. ಎಲ್ಲ ಹಿರಿಯರ ಜತೆ ಈ ಬಗ್ಗೆ ಚರ್ಚಿಸಿ ಮೂವರೂ ಸಂತೋಷವಾಗಿ ಬದುಕಬೇಕು ಎಂಬ ನಿರ್ಧಾರಕ್ಕೆ ಬಂದೆ ಎಂದು ಸುಜಿತ್‌ ಹೇಳಿದ್ದಾರೆ.

Comments are closed.