ರಾಷ್ಟ್ರೀಯ

ಆರೆಸ್ಸೆಸ್‌ ಪ್ರಚಾರಕರ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಣಬ್ ಮುಖರ್ಜಿ

Pinterest LinkedIn Tumblr


ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜೂನ್‌ 7ರಂದು ಆರೆಸ್ಸೆಸ್‌ ಪ್ರಚಾರಕರ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಯಾವ್ಯಾವ ವಿಚಾರಗಳನ್ನು ಪ್ರಸ್ತಾಪಿಸುವರೋ ಎಂದು ಕಾಂಗ್ರೆಸ್‌ ಆತಂಕದಿಂದ ನಿರೀಕ್ಷಿಸುತ್ತಿದೆ. ನಾಗಪುರದಲ್ಲಿ ಕಾರ್ಯಕ್ರಮ ಮುಗಿಯುವ ವರೆಗೂ ಪಕ್ಷದ ವತಿಯಿಂದ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡದಿರಲು ನಿರ್ಧರಿಸಿದೆ.

ಕಾಂಗ್ರೆಸ್‌ ಮತ್ತು ಆರೆಸ್ಸೆಸ್‌ ಸಿದ್ಧಾಂತಗಳಲ್ಲಿ ಅಜಗಜಾಂತರವಿರುವುದರಿಂದ ಸದ್ಯಕ್ಕೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ಟಾಮ್‌ ವಡಕ್ಕನ್‌ ತಿಳಿಸಿದರು.

‘ಮುಖರ್ಜಿ ಅವರು ರಾಷ್ಟ್ರಪತಿ ಪದವಿಗೇರಿದ ಬಳಿಕ ರಾಜಕೀಯ ತೊರೆದಿದ್ದಾರೆ. ಅವರು ಯಾವುದೇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರೂ ಅದು ಅವರ ವೈಯಕ್ತಿಕ ನಂಬಿಕೆ, ನಿಲುವುಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಅವರು ಕಳೆದ 50 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ನಂಬಿಕೊಂಡು ಬಂದ ತತ್ವ ಸಿದ್ಧಾಂತಗಳನ್ನು ಅವರು ಈಗ ನೀಡುವ ಹೇಳಿಕೆಗಳಿಗೂ ತುಲನೆ ಮಾಡಿ ನಿರ್ಧರಿಸಬಹುದು’ ಎಂದು ಇನ್ನೊಬ್ಬ ಕಾಂಗ್ರೆಸ್‌ ವಕ್ತಾರ ಅಭಿಷೇಕ್ ಸಿಂಘ್ವಿ ಪ್ರತಿಕ್ರಿಯಿಸಿದರು.

ಆರೆಸ್ಸೆಸ್‌ ಸಮಾವೇಶದಲ್ಲಿ ಮುಖರ್ಜಿ ಅವರು ನಿಜವಾದ ರಾಷ್ಟ್ರೀಯತೆ ಬಗ್ಗೆ ಮಾತನಾಡುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ಕಡು ವಿರೋಧಿಯಾದ ಹಿಂದುತ್ವ ಪ್ರತಿಪಾದಕ ಸಂಘಟನೆಯ ವೇದಿಕೆಯಲ್ಲಿ ಅವರು ನಿರಾತಂಕವಾಗಿ ತಮ್ಮ ನಿಲುವುಗಳನ್ನು ಪ್ರಕಟಿಸಲಿದ್ದಾರೆ ಎಂದು ಮುಖರ್ಜಿ ಅವರನ್ನು ನಿಕಟವಾಗಿ ಬಲ್ಲವರು ಹೇಳುತ್ತಾರೆ.

ಹಾಗಿದ್ದರೂ ಕಾಂಗ್ರೆಸ್‌ಗೆ ಒಳಗೊಳಗೇ ಆತಂಕ ತೀವ್ರವಾಗಿದೆ. ಕಾಂಗ್ರೆಸ್‌ ನಾಯಕರಾಗಿಯೇ ರಾಜಕೀಯದಲ್ಲಿ ರಾಷ್ಟ್ರದ ಉನ್ನತ ಹುದ್ದೆಗೇರಿದ ಬಳಿಕ ಅವರು, ಆರೆಸ್ಸೆಸ್‌ ವೇದಿಕೆ ಹತ್ತುವುದನ್ನೇ ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ‘ಜಾತ್ಯತೀತವಾದಿ’ ನಾಯಕರೊಬ್ಬರು ಹಿಂದುತ್ವದ ವೇದಿಕೆ ಏರುವುದನ್ನು ಕನಸಿನಲ್ಲೂ ಕಲ್ಪಿಸಲಿಕೊಳ್ಳಲಾಗದ ಸ್ಥಿತಿ ಕಾಂಗ್ರೆಸ್‌ನದ್ದಾಗಿದೆ.

ಆದರೆ ಆರೆಸ್ಸೆಸ್‌ನ ಆಹ್ವಾನವನ್ನು ಒಪ್ಪಿಕೊಂಡಿರುವ ಪ್ರಣಬ್‌ ಮುಖರ್ಜಿ ಪ್ರಚಾರಕರ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಇಂದಿಗೂ ಬಿಜೆಪಿ-ಆರೆಸ್ಸೆಸ್‌ ಅನ್ನು ಅಸ್ಪೃಶ್ಯವೆಂದೇ ಪರಿಗಣಿಸಿರುವ ಕಾಂಗ್ರೆಸ್‌ಗೆ ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂದು ತಿಳಿಯುತ್ತಿಲ್ಲ ಎಂದು ವೀಕ್ಷಕರು ಅಭಿಪ್ರಾಯ ಪಡುತ್ತಾರೆ.

”ಜಾತ್ಯತೀತ ನೆಲೆಗಟ್ಟಿನಲ್ಲಿ ದಶಕಗಳ ಕಾಲ ರಾಜಕಾರಣ ನಡೆಸಿದ ತಾವು ಇಂತಹ ನಿಲುವು ಕೈಗೊಂಡಿದ್ದರ ಬಗ್ಗೆ ಅಚ್ಚರಿಯಾಗುತ್ತಿದೆ. ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗ ತಮ್ಮಂಥವರು ಆರ್‌ಎಸ್‌ಎಸ್‌ ಆಹ್ವಾನ ಸ್ವೀಕರಿಸಿ ಸಂಘಟನೆಯ ಮುಖ್ಯ ಕಚೇರಿಗೆ ಭೇಟಿ ನೀಡುತ್ತಿರುವುದು ಉತ್ತಮವೆನಿಸದು,” ಎಂದು ಷರೀಫ್‌ ತಮ್ಮ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

ಭಾರದ್ವಾಜ್‌, ಗಡ್ಕರಿ ಸಮರ್ಥನೆ: ಆದರೆ ಮತ್ತೊಬ್ಬ ಹಿರಿಯ ಕಾಂಗ್ರೆಸಿಗ ಎಚ್‌.ಆರ್‌ ಭಾರದ್ವಾಜ್‌ ಅವರು ಮುಖರ್ಜಿಯವರ ಅರೆಸ್ಸೆಸ್‌ ಭೇಟಿಯನ್ನು ಬೆಂಬಲಿಸಿದ್ದಾರೆ.

ಪ್ರಣಬ್‌ ಅವರು ಈ ಆಹ್ವಾನ ಸ್ವೀಕರಿಸಿರುವುದು ಒಂದು ಉತ್ತಮ ಆರಂಭವಾಗಿದ್ದು, ‘ರಾಜಕೀಯ ಅಸ್ಪೃಶ್ಯತೆ’ ಈಗ ಅಪ್ರಸ್ತುತ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಇದೇ ವೇಳೆ, ಆರೆಸ್ಸೆಸ್‌ ಪಾಕಿಸ್ತಾನದ ಐಎಸ್‌ಐನಂತಲ್ಲ ಎಂದಿದ್ದಾರೆ.

Comments are closed.