ರಾಷ್ಟ್ರೀಯ

ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ 7 ಜನರ ದಾರುಣ ಸಾವು

Pinterest LinkedIn Tumblr


ವಡೋದರಾ/ಆನಂದ: ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ 7 ಜನರು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯ ಅದಾಸ್ ಗ್ರಾಮದ ಬಳಿ ಭಾನುವಾರ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಬಲಿಪಶುಗಳು ಆನಂದ್ ಜಿಲ್ಲೆಯಲ್ಲಿರುವ ತಾರಾಪುರದಲ್ಲಿರುವ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಭರುಚ್‌ಗೆ ಮರಳುತ್ತಿದ್ದರು. ಕಾರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಾಗುತ್ತಿದ್ದಾಗ ರಾಂಗ್ ಸೈಡ್‌ನಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಐದು ವರ್ಷದ ಮಗು, ಮೂವರು ಮಹಿಳೆಯರು ಸೇರಿದಂತೆ 7 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತರನ್ನು ವಿಧಿ ಪಟೇಲ, ಆಕೆಯ ಪತಿ ಹಾರ್ದಿಕ್, ದಂಪತಿಯ ಐದು ವರ್ಷದ ಮಗ ಜಿಮ್ಮಿತ್, ನಟವರ್ ಪಟೇಲ್, ಅವರ ಪತ್ನಿ ಮೃದುಲಾ, ಹೀರಾಲಾಲ್ ಪಟೇಲ್ ಮತ್ತವರ ಪತ್ನಿ ವೈಶಾಲಿ ಎಂದು ಗುರುತಿಸಲಾಗಿದೆ.

ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ನಟವರ್ ಪಟೇಲ್ ಮತ್ತು ಮೃದುಲಾ ಅವರಿಬ್ಬರು ಮಧ್ಯ ವಯಸ್ಸಿನವರಾಗಿದ್ದು ಉಳಿದ ನಾಲ್ವರು 30ರಿಂದ 35ರ ಪ್ರಾಯದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ದೇಹಗಳನ್ನು ವಸಾದ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಸಂಬಂಧಿಕರಿಗೆ ಸುದ್ದಿ ಮುಟ್ಟಿಸಲಾಗಿದೆ.

ಅಪಘಾತದ ಬಳಿಕ ಪರಾರಿಯಾಗಿರುವ ಲಾರಿ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Comments are closed.