ರಾಷ್ಟ್ರೀಯ

ನಿಫಾ ವೈರಸ್ ಚಿಕಿತ್ಸೆಗಾಗಿ ಮಲೇಷ್ಯಾದಿಂದ 8000 ರಿಬಾವೈರಿನ್‌ ಮಾತ್ರೆ ಆಮದು!

Pinterest LinkedIn Tumblr


ಕಾಸರಗೋಡು: ಕಲ್ಲಿಕೋಟೆ ಸಹಿತ ಕೇರಳದಲ್ಲಿ 11 ಮಂದಿಯನ್ನು ಬಲಿ ಪಡೆದಿರುವ ನಿಫಾ ವೈರಸ್‌ನಿಂದ ಬಳಲುತ್ತಿರುವ 12 ಮಂದಿಯ ತುರ್ತು ಚಿಕಿತ್ಸೆಗಾಗಿ ಮಲೇಷ್ಯಾದಿಂದ 8000 ರಿಬಾವೈರಿನ್‌ ಮಾತ್ರೆಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಸೋಂಕಿಗೆ ಒಳಗಾದವರು ತೀವ್ರ ನಿಗಾದಲ್ಲಿದ್ದು, ನಿಯಂತ್ರಣಕ್ಕೆ ತರುವ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.

1998ರಲ್ಲಿ ಮಲೇಷ್ಯಾದಲ್ಲಿ ನಿಫಾ ವೈರಸ್‌ ಹರಡಿದ ಸಂದರ್ಭದಲ್ಲಿ ಉಪಯೋಗಿಸಿದ್ದ ರಿಬಾವೈರನ್‌ ಮಾತ್ರೆಗಳನ್ನು ಬುಧವಾರ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲುಪಿಸಲಾಗಿದೆ. ನಿಫಾ ವೈರಸ್‌ನ್ನು ಸಂಪೂರ್ಣ ಹತೋಟಿಗೆ ತರಲು ಸಾಧ್ಯವಾಗದಿದ್ದರೂ ರಿಬಾವೈರಿನ್‌ ಮಾತ್ರೆಗಳು ತಕ್ಕಮಟ್ಟಿಗೆ ಪರಿಣಾಮಕಾರಿ ಎಂದು ಭಾವಿಸಲಾಗಿದೆ. ಕೇಂದ್ರ ಸರಕಾರದ ಮಧ್ಯಸ್ಥಿಕೆಯಿಂದ ಈ ಮಾತ್ರೆಗಳನ್ನು ತರಿಸಿಕೊಳ್ಳಲಾಗಿದೆ.
ಈ ಮಾತ್ರೆಗಳನ್ನು ವೈದ್ಯರ ನಿರ್ದೇಶನ ಪ್ರಕಾರ ನಿಫಾ ವೈರಸ್‌ ತಗುಲಿರುವ ರೋಗಿಗಳಿಗೂ, ರೋಗ ಕಾಣಿಸಿಕೊಂಡ ಪ್ರದೇಶದಲ್ಲಿರುವರಿಗೂ ವಿತರಿಸಲಾಗುತ್ತದೆ. ಈ ಮಧ್ಯೆ ನಿಫಾ ವೈರಸ್‌ ಹರಡುವುದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

ಹತ್ತು ಲಕ್ಷ ಸಹಾಯಧನ:

ನಿಫಾ ವೈರಸ್‌ ಬಾಧೆಯಿಂದ ಚಿಕಿತ್ಸೆಯಲ್ಲಿದ್ದ ಮೃತಪಟ್ಟ ದಾದಿ ಲಿನಿ ಅವರ ಇಬ್ಬರು ಮಕ್ಕಳಿಗೆ ಕೇರಳ ರಾಜ್ಯ ಸರಕಾರ ತಲಾ 10 ಲಕ್ಷ ರೂ. ಸಹಾಯಧನ ನೀಡಿದೆ. ಲಿನಿಯ ಪತಿ ಸಜೀಶ್‌ಗೆ ಸರಕಾರಿ ಉದ್ಯೋಗ ನೀಡುವುದಾಗಿ ಕೇರಳ ರಾಜ್ಯ ಸರಕಾರ ತಿಳಿಸಿದೆ. ನಿಫಾ ವೈರಸ್‌ನಿಂದ ಮೃತಪಟ್ಟ ಇತರ ರೋಗಿಗಳ ಆಶ್ರಿತರಿಗೆ ಐದು ಲಕ್ಷ ರೂ. ಸಹಾಯಧನ ಘೋಷಿಸಲಾಗಿದೆ. ವೈರಸ್‌ ಬಾಧಿತರ ಎಲ್ಲ ಚಿಕಿತ್ಸಾ ವೆಚ್ಚವನ್ನು ಕೇರಳ ರಾಜ್ಯ ಸರಕಾರ ವಹಿಸಲಿದೆ.

ಬುಧವಾರ ಮಾತ್ರ ನಿಫಾ ವೈರಸ್‌ ಲಕ್ಷ ಣ ಹೊಂದಿರುವ ಇಬ್ಬರನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ರೋಗ ಲಕ್ಷ ಣಗಳೊಂದಿಗೆ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಿಕೊಡಲಾಗಿದೆ.

ಪ್ರವಾಸಿಗರಿಗೆ ನಿಷೇಧ:

ಈ ನಡುವೆ, ನಿಫಾ ವೈರಸ್‌ ಕಾರಣದಿಂದ ಉತ್ತರ ಕೇರಳದ ನಾಲ್ಕು ಜಿಲ್ಲೆಗಳಿಗೆ ತೆರಳದಂತೆ ಪ್ರವಾಸಿಗರಿಗೆ ಕೇರಳ ಸರಕಾರ ಎಚ್ಚರಿಕೆ ನೀಡಿದೆ.
‘‘ಸೋಂಕಿನ ಎಲ್ಲ ಪ್ರಕರಣಗಳು ಒಂದು ಕುಟುಂಬದೊಂದಿಗೆ ಸಂಬಂಧ ಹೊಂದಿವೆ. ಕಲ್ಲಿಕೋಟೆ ಮತ್ತು ನೆರೆಯ ಜಿಲ್ಲೆಗಳಾದ ಮಲ್ಲಪುರಂ, ವಯಾನಾಡ್‌, ಕಣ್ಣೂರು ಜಿಲ್ಲೆಗಳಲ್ಲಿ ನಿಫಾ ವೈರಸ್‌ ಸೋಂಕು ಹರಡದಂತೆ ಸರಕಾರ ನಿಗಾವಹಿಸಿದೆ,’’ ಎಂದು ಕೇರಳದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೀವ್‌ ಸದಾನಂದನ್‌ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments are closed.