ಕೋಯಿಕ್ಕೋಡ್: ಲಸಿಕೆಯೇ ಇಲ್ಲದ ನಿಗೂಢ ವೈರಾಣು ಸೋಂಕು ಕೇರಳದಲ್ಲಿ ಪತ್ತೆಯಾಗಿದ್ದು, ವೈರಾಣು ಸೋಂಕಿಗೆ ಕನಿಷ್ಟ 6 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೇರಳದ ಕೊಯಿಕ್ಕೋಡ್ ಜಿಲ್ಲೆಯ ಪೆರಂಬಾರಾದಲ್ಲಿ ಕೇವಲ ಎರಡು ವಾರದಲ್ಲಿ ಒಂದೇ ಕುಟುಂಬದ ಮೂವರು ಸೇರಿ 6 ಜನ ನಿಗೂಢ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಿಗೂಢ ವೈರಸ್ ಸೋಂಕಿನಿಂದಾಗಿ ಕಳೆದ ಎರಡು ವಾರದಿಂದ ಜ್ವರದಿಂದ ಬಳಲುತ್ತಿದ್ದ ಪೆರಂಬಾರಾದ ಒಂದೇ ಕುಟುಂಬದ ಮೊಹಮ್ಮದ್ ಸಾದಿಕ್ (26 ವರ್ಷ), ಮೊಹಮ್ಮದ್ ಸಾಲಿಯಾ (28) ಮತ್ತು ಮರಿಯುಮ್ಮಾ (50) ಕೊಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೀಗ ಮತ್ತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ನಿಪಾಹ್ ಎಂಬ ವೈರಾಣು ಸೋಂಕಿನಿಂದ ಬಳಲುತ್ತಿದ್ದಾ ಈ ಮೂವರಿಗೆ ಚಿಕಿತ್ಸೆ ನೀಡುತ್ತಿದ್ದ ಓರ್ವ ದಾದಿ ಸೇರಿದಂತೆ ಮೂರು ಮಂದಿ ಮೃತರಾಗಿದ್ದಾರೆ ಎನ್ನಲಾಗಿದೆ.
ಅಂತೆಯೇ ಇನ್ನೂ 25ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ನಿಪಾಹ್ ವೈರಾಣು ಸೋಂಕು ಶಂಕಿತ ರೋಗಿಗಳನ್ನು ತೀವ್ರ ಕಟ್ಟೆಚ್ಚರದಿಂದ ಚಿಕಿತ್ಸೆಗೆ ಒಳಪಡಿಸಲಾಗುತ್ತಿದ್ದು, ಪೂರಕ ಔಷಧಗಳಿಂದ ಉಪಚರಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ನಿಪಾಹ್ ವೈರಾಣು ಸೋಂಕಿನ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚನೆ
ಇನ್ನು ಕೇರಳದಲ್ಲಿ ಆತಂಕ ಸೃಷ್ಟಿ ಮಾಡಿರುವ ಮಾರಕ ನಿಪಾಹ್ ವೈರಾಣು ಸೋಂಕು ನಿಯಂತ್ರಣಕ್ಕೆ ಕೇರಳ ಸರ್ಕಾರ ಕಲ್ಲಿಕೋಟೆ ಜಿಲ್ಲಾಧಿಕಾರಿ ಯುವಿ ಜೋಸ್ ಅವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದು, ಪ್ರಸ್ತುತ ವೈರಾಣು ಸೋಂಕಿಗೆ ಬಲಿಯಾಗಿರುವ ಮೃತರ ರಕ್ತದ ಮಾದರಿಯನ್ನು ಸಂಗ್ರಹಿಸಿ ಮಣಿಪಾಲದ ವೈರಾಲಜಿ ಪ್ರಯೋಗಾಲಯ ಸಂಸ್ಥೆಗೆ ರವಾನೆ ಮಾಡಲಾಗಿದೆ. ಕೇರಳದಲ್ಲಿನ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರ ಕೂಡ ಗಂಭೀರ ಚಿಂತನೆಯಲ್ಲಿ ತೊಡಗಿದ್ದು, ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಕಾರ್ಯದರ್ಶಿಗಳೊಂದಿಗೆ ಕೋಯಿಕ್ಕೋಡ್ ಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಈ ಸಂಬಂಧ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ವದಂತಿಗಳಿಗೆ ಕಿವಿಗೊಡಬೇಡಿ. ಧೈರ್ಯವಾಗಿರಿ. ಎಲ್ಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜನತೆಗೆ ಮನವಿ ಮಾಡಿದ್ದಾರೆ.
ಪ್ರತ್ಯೇಕ ವಾರ್ಡ್
ಪರಿಸ್ಥಿತಿ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ವೈದ್ಯರ ನೆರವನ್ನೂ ಪಡೆಯಲಾಗುತ್ತಿದ್ದು, ಮಣಿಪಾಲ್ ಮತ್ತು ಅಪೋಲೊ ಆಸ್ಪತ್ರೆಯ ವೈರಾಲಜಿ ವಿಭಾಗದ ತಜ್ಞರು ಪೆರಂಬಾರಾ ಪ್ರದೇಶಕ್ಕೆ ಭೇಟಿ ಕೊಟ್ಟು ಸೋಂಕು ಪೀಡಿತರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಕೊಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇದಕ್ಕೆಂದೇ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ ಎಂದೂ ಸಚಿವರು ಹೇಳಿದರು. ವೈರಸ್ ತಗುಲಿದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು ಅವುಗಳನ್ನು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ವರದಿ ಬರಲಿದೆ ಎಂದಿರುವ ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ, ವೈರಸ್ ಪತ್ತೆ ಹಾಗೂ ಹೆಚ್ಚುವರಿ ಚಿಕಿತ್ಸೆಗೆ ತಜ್ಞರ ತಂಡವನ್ನು ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ನಡ್ಡಾ ಮಾಧ್ಯಮಗಳಿಗೆ ತಿಳಿಸಿದರು.
Comments are closed.