ರಾಷ್ಟ್ರೀಯ

ರಾಜ್ಯ ವಿಧಾನಸಭೆ ಚುನಾವಣೆಯ ನಂತರ 7ನೇ ದಿನವೂ ಏರಿದ ಪೆಟ್ರೋಲ್, ಡೀಸೆಲ್ ಬೆಲೆ

Pinterest LinkedIn Tumblr


ಹೊಸದಿಲ್ಲಿ: ಜಾಗತಿಕ ಇಂಧನ ದರ ಏರಿಕೆಯ ಪರಿಣಾಮ ಭಾರತದ ಮೇಲೆ ತಟ್ಟಿದೆ. ಇದರಿಂದಾಗಿ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿದ್ದು, ಕರ್ನಾಟಕ ಚುನಾವಣೆ ಅಂತ್ಯವಾದ ಬಳಿಕ ಸತತ 7 ನೇ ದಿನವೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕಂಡಿದೆ. ಸತತ 4 ವಾರಗಳಿಂದ ಇಂಧನ ದರ ಏರಿಕೆಯಾಗ್ತಿದೆ. ಇದರಿಂದಾಗಿ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಹ ಗ್ರಾಹಕರಿಗೆ ಬೆಲೆ ಏರಿಕೆಯ ವರ್ಗಾವಣೆ ಮಾಡಿದೆ.

ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 77 ರೂ. 48 ಪೈಸೆಗೆ ಏರಿಕೆಯಾಗಿದ್ರೆ, ಡೀಸೆಲ್ ಬೆಲೆ 68 ರೂ. 73 ಪೈಸೆಗೆ ಹೆಚ್ಚಾಗಿದೆ. ಅಲ್ಲದೆ, ದಿಲ್ಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 33 ಪೈಸೆ ಹೆಚ್ಚಾಗಿದ್ದು, ಡೀಸೆಲ್ ಬೆಲೆ 26 ಪೈಸೆ ಏರಿಕೆಯಾಗಿದೆ. ಹೀಗಾಗಿ ಒಂದು ಲೀಟರ್ ಪೆಟ್ರೋಲ್ ಬೆಲೆ 76 ರೂ. 24 ಪೈಸೆಗೆ ಆಗಿದ್ರೆ, ಡೀಸೆಲ್ ಬೆಲೆ 67 ರೂ. 57 ಪೈಸೆಗೆ ಹೆಚ್ಚಾಗಿದ್ದು, ದಾಖಲೆ ಮಟ್ಟ ತಲುಪಿದೆ. ಇನ್ನು, ಇತರೆ ಮೆಟ್ರೋ ಹಾಗೂ ರಾಜ್ಯದ ರಾಜಧಾನಿಗಳನ್ನು ಹೋಲಿಸಿದ್ರೆ, ದಿಲ್ಲಿಯಲ್ಲೇ ಬೆಲೆ ಕಡಿಮೆಯಿದೆ. ಇನ್ನು, ಮುಂಬೈನಲ್ಲಿ ಬೆಲೆ ಅತಿ ಹೆಚ್ಚಾಗಿದ್ದು, ಒಂದು ಲೀಟರ್ ಪೆಟ್ರೋಲ್ ಬೆಲೆ 84 ರೂ. 7 ಪೈಸೆಯಿದ್ರೆ, ಪಣಜಿಯಲ್ಲಿ ಅತಿ ಕಡಿಮೆ ಅಂದ್ರೆ 70 ರೂ. 26 ಪೈಸೆ ಇದೆ.

ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ 19 ದಿನಗಳ ಕಾಲ ದೇಶದಲ್ಲಿ ಬೆಲೆ ಹೆಚ್ಚಾಗಿರಲಿಲ್ಲ. ಆದರೆ, ಚುನಾವಣೆ ಮುಗಿದ ಬಳಿಕ ಮೇ 14 ರಿಂದ ಬೆಲೆ ಪ್ರತಿದಿನ ಏರಿಕೆಯಾಗ್ತಿದೆ. ಇಂದು ಸಹ ಸತತ 7 ನೇ ದಿನ ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಬೆಲೆಯನ್ನು ಹೆಚ್ಚುಗೊಳಿಸಿದೆ. ಇದರಿಂದಾಗಿ, ಕಳೆದ ಒಂದು ವಾರದಿಂದ ದಿಲ್ಲಿಯಲ್ಲಿ 1. 61 ಪೈಸೆ ಪೆಟ್ರೋಲ್ ಬೆಲೆ ಹೆಚ್ಚಾಗಿದ್ದು, ಡೀಸೆಲ್ ಬೆಲೆ 1.64 ರೂ. ಹೆಚ್ಚಾಗಿದೆ.

ನವೆಂಬರ್ 2014ರ ಬಳಿಕ ಇದೇ ಮೊದಲ ಬಾರಿಗೆ ಜಾಗತಿಕ ಇಂಧನ ದರ ಒಂದು ಬ್ಯಾರೆಲ್‌ಗೆ 80 ಡಾಲರ್‌ಗೆ ಹೆಚ್ಚಾಗಿದೆ. ಈ ಹಿನ್ನೆಲೆ, ಬೆಲೆ ಹೆಚ್ಚಳವನ್ನು ಕೇಂದ್ರ ಸರಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಅಬಕಾರಿ ಸುಂಕ ಇಳಿಕೆ ಬಗ್ಗೆ ಪ್ರಶ್ನೆ ಮಾಡಿದಾಗ, ಕೆಲವು ದಿನಗಳ ಕಾಲ ಗಮನಿಸಿ ಎಂದು ಹೇಳಿಕೆ ನೀಡಿದೆ.

ನವೆಂಬರ್ 2014 ರ ಬಳಿಕ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಬಕಾರಿ ಸುಂಕವನ್ನು 9 ಬಾರಿ ಹೆಚ್ಚಿಸಿದೆ. ಇದರಿಂದಾಗಿ ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 11 ರೂ. 77 ಪೈಸೆಯಷ್ಟು ಹೆಚ್ಚಾಗಿದ್ದು, ಡೀಸೆಲ್ ಬೆಲೆ 13 ರೂ. 47 ಪೈಸೆಯಷ್ಟು ಏರಿಕೆಯಾಗಿತ್ತು. ಬಳಿಕ, ಅಕ್ಟೋಬರ್ 2017ರಲ್ಲಿ ಲೀಟರ್‌ಗೆ 2 ರೂಪಾಯಿಯಷ್ಟು ಅಬಕಾರಿ ಸುಂಕ ಇಳಿಕೆ ಮಾಡಿತ್ತು. ಅಲ್ಲದೆ, ಜೂನ್ 2017 ರಿಂದ ಪ್ರತಿದಿನ ಇಂಧನ ದರದಲ್ಲಿ ವ್ಯತ್ಯಾಸವಾಗ್ತಿದೆ.

Comments are closed.