ರಾಷ್ಟ್ರೀಯ

ತವರಿಗೆ ಹೋಗುತ್ತೇನೆ ಎಂದ ಹೆಂಡತಿಯನ್ನು ಕೊಂದು ಹಾಕಿದ ಗಂಡ!

Pinterest LinkedIn Tumblr


ಝಲವಾರ್‌, ರಾಜಸ್ಥಾನ : ತವರಿಗೆ ಹೋಗಲು ಬಯಸಿದ 45ರ ಹರೆಯದ ಹೆಂಡತಿಯೊಂದಿಗೆ ಜಗಳವಾಡಿದ ಪತಿಯೋರ್ವ, ಆಕೆ ತನ್ನಿಬ್ಬರು ಪುತ್ರಿಯರೊಂದಿಗೆ ನಿದ್ರಿಸಿಕೊಂಡಿದ್ದಾಗ ಆಕೆಯನ್ನು ಹರಿತವಾದ ಆಯುಧದಿಂದ ಕಡಿದು ಕೊಂದಿರುವ ಅತ್ಯಮಾನುಷ ಘಟನೆ ರಾಜಸ್ಥಾನದ ಝಲವಾರ್‌ ಜಿಲ್ಲೆಯ ಖೇರಖೇಡ ಗ್ರಾಮದಿಂದ ವರದಿಯಾಗಿದೆ.

ಪತ್ನಿ ಗುಡ್ಡಿ ಕನ್ವರ್‌ ರಜಪೂತ್‌ ಳನ್ನು ಕಳೆದ ಬುಧವಾರ ರಾತ್ರಿ ಕಡಿದು ಕೊಂದಿರುವ 48 ವರ್ಷದ ಪತಿ, ಚೈನ್‌ ಸಿಂಗ್‌ ಎಂಬಾತ ಕೊಲೆ ಕೃತ್ಯಕ್ಕೆ ಬಳಸಿದ ಕುಠಾರಿಯ ಸಹಿತ ಪರಾರಿಯಾಗಿದ್ದು ಆತನಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಬುಧವಾರ ಮಧ್ಯಾಹ್ನ ಪತ್ನಿ ಗುಡ್ಡಿ ಕನ್ವರ್‌ ತನ್ನ ತವರು ಮನೆಗೆ ಹೋಗಲು ತಾನು ಬಯಸಿರುವುದಾಗಿ ಪತಿಗೆ ಹೇಳಿದ್ದಳು. ಈ ವಿಷಯದಲ್ಲಿ ಆಕೆಯೊಂದಿಗೆ ಪತಿ ಚೈನ್‌ ಸಿಂಗ್‌ ಜಗಳ ತೆಗೆದ. ಅಂದು ರಾತ್ರಿ ತನ್ನ ಇಬ್ಬರು ಪುತ್ರಿಯರೊಂದಿಗೆ ಮಲಗಿಕೊಂಡಿದ್ದ ಪತ್ನಿಯನ್ನು ಆತ ನಿರ್ದಯವಾಗಿ ಕಡಿದು ಕೊಂದ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಮಹಿಳೆಯ ಶವವನ್ನು ಪೊಲೀಸರು ಆಕೆಯ ಮನೆಯವರಿಗೆ ಬಿಟ್ಟುಕೊಟ್ಟಿದ್ದಾರೆ ಮತ್ತು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.