ರಾಷ್ಟ್ರೀಯ

ಮಗ ಅನುತ್ತೀರ್ಣನಾಗಿದ್ದಕ್ಕೆ ಪಟಾಕಿ ಹೊಡೆದ ತಂದೆ

Pinterest LinkedIn Tumblr


ಭೋಪಾಲ್: ಪರೀಕ್ಷೆಗಳಲ್ಲಿ ತಮ್ಮ ಮಕ್ಕಳು ಉತ್ತೀರ್ಣರಾದರೆ ನೆರೆಹೊರೆಯವರಿಗೆ, ಬಂಧುಗಳನ್ನು ಮನೆಗೆ ಕರೆದು ಪಾರ್ಟಿ ಕೊಡುವ ತಂದೆತಾಯಿಯನ್ನು ನೋಡಿರುತ್ತೇವೆ. ಆದರೆ ಮಧ್ಯಪ್ರದೇಶದ ತಂದೆಯೊಬ್ಬರು ತನ್ನ ಮಗ ಹತ್ತನೇ ತರಗತಿಯಲ್ಲಿ ಫೇಲಾಗಿದ್ದಕ್ಕೆ ಎಲ್ಲರನ್ನೂ ಕರೆದು ಪಾರ್ಟಿ ಕೊಟ್ಟಿದ್ದಾರೆ.

ಆ ತಂದೆ ಆ ರೀತಿ ಮಾಡಿದ್ದಕ್ಕೆ ಕಾರಣವೊಂದಿದೆ. ಇಷ್ಟಕ್ಕೂ ನಡೆದದ್ದೇನೆಂದರೆ, ಭೋಪಾಲ್ ಮೂಲದ ಸುರೇಂದ್ರ ಕುಮಾರ್ ವ್ಯಾಸ್ ಅವರ ಮಗ ಅಶು ಹತ್ತನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆದ. ಆದರೆ ತಮ್ಮ ಮಗನನ್ನು ಬೈದು, ಹೊಡೆದು ಬಡಿದು ಮಾಡದೆ ವಿನೂತನವಾಗಿ ಮನೆ ಮುಂದೆ ಟೆಂಟ್ ಹಾಕಿ ಎಲ್ಲರನ್ನೂ ಕರೆದು ಪಾರ್ಟಿ ಕೊಟ್ಟಿದ್ದಾರೆ.

ಸ್ನೇಹಿತರು, ಬಂಧುಗಳನ್ನು ಕರೆದು ಸಿಹಿ ಹಂಚಿ ಅವರೊಂದಿಗೆ ಪಟಾಕಿಯನ್ನೂ ಸಿಡಿಸಿ ಸಂಭ್ರಮಿಸಿದ್ದಾರೆ. ಈ ವಿಷಯ ಸ್ಥಳೀಯ ಮಾಧ್ಯಮಗಳಿಗೆ ಗೊತ್ತಾಗಿ ಅವರೆಲ್ಲ ಸುರೇಂದ್ರ ಮನೆಗೆ ದೌಡಾಯಿಸಿದ್ದಾರೆ. ಮಗ ಫೇಲ್ ಆಗಿದ್ದಕ್ಕೆ ಪಾರ್ಟಿ ಯಾಕೆ ಕೊಡುತ್ತಿದ್ದೀರಿ? ಎಂದು ಕೇಳಿದ್ದಕ್ಕೆ, ”ಫಲಿತಾಂಶ ಅಷ್ಟು ಮುಖ್ಯ ಅಲ್ಲ. ಅವನು ಫೇಲ್ ಆದ ಎಂದು ನಾನು ಹೊಡೆದರೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಏನಾದರೂ ಅನಾಹುತ ಮಾಡಿಕೊಂಡರೆ ನನ್ನ ಕೈಲಿ ಸಹಿಸಕ್ಕೆ ಆಗಲ್ಲ. ಅದಕ್ಕೆ ಬದಲಾಗಿ ಈ ರೀತಿ ಪಾರ್ಟಿ ಕೊಟ್ಟು ಪ್ರೋತ್ಸಾಹಿಸಬೇಕೆಂದು ನಿರ್ಧರಿಸಿದೆ” ಎಂದು ಹೇಳಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದರೆ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ನೋವನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಂತಹ ಮಕ್ಕಳಿಗೆಲ್ಲಾ ನಾನು ಹೇಳುವುದೇನೆಂದರೆ, ಮೊನ್ನೆ ನಡೆದ ಪರೀಕ್ಷೆಗಳೇ ಕೊನೆಯ ಪರೀಕ್ಷೆಗಳು ಎಂದು ಭಾವಿಸಬೇಡಿ. ಅದಕ್ಕಿಂತಲೂ ಜೀವನದಲ್ಲಿ ಸಾಧಿಸಬೇಕಾದದ್ದು ಸಾಕಷ್ಟಿದೆ. ನಮ್ಮ ಹುಡುಗ ಈ ವರ್ಷ ಫೇಲ್ ಆದ. ಮುಂದಿನ ವರ್ಷ ಉತ್ತೀರ್ಣನಾಗುತ್ತಾನೆ” ಎಂದಿದ್ದಾರೆ.

ಸುರೇಂದ್ರ ಕುಮಾರ್ ಭೋಪಾಲ್‌ನಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಮಗನ ವಿಚಾರದಲ್ಲಿ ಅವರು ತೆಗೆದುಕೊಂಡ ವಿನೂತನ ನಿರ್ಧಾರವನ್ನು ಎಲ್ಲರೂ ಗೌರವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸುರೇಂದ್ರ ಅವರ ಪುತ್ರ ಮಾತನಾಡುತ್ತಾ, “ನನ್ನನ್ನು ಏನೂ ಬೈಯ್ಯದೆ ಇರುವುದಕ್ಕೆ ನಮ್ಮ ತಂದೆಗೆ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ. ಮುಂದಿನ ವರ್ಷ ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುವುದಾಗಿ ಭಾಷೆ ನೀಡುತ್ತಿದ್ದೇನೆ”
ಎಂದಿದ್ದಾನೆ.

Comments are closed.