ರಾಷ್ಟ್ರೀಯ

ಲಂಚ ನೀಡಲು ಯತ್ನಿಸುತ್ತಿರುವುದು ವಿಡಿಯೋ ಬಹಿರಂಗ; ಚುನಾವಣೆ ಸ್ಪರ್ಧೆಯಿಂದ ಶ್ರೀರಾಮುಲು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ

Pinterest LinkedIn Tumblr

ನವದೆಹಲಿ: ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರು ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿಯ ಸಂಬಂಧಿಗೆ ಲಂಚ ನೀಡಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಬಹಿರಂಗವಾಗಿದ್ದು, ವಿಧಾನಸಭೆ ಚುನಾವಣಾ ಸ್ಪರ್ಧೆಯಿಂದ ಅವರನ್ನು ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಶುಕ್ರವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ಶ್ರೀರಾಮುಲು ಅವರನ್ನು ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ನಾವು ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.

ಶ್ರೀರಾಮುಲು ಅವರು ಸುಪ್ರೀಂ ಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಅಳಿಯನೊಂದಿಗೆ ಲಂಚದ ಕುರಿತು ಮಾತನಾಡಿರುವ ವಿಡಿಯೋ ಸೇರಿದಂತೆ ಪ್ರಮುಖ 4 ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ದಾಖಲೆಗಳ ಆಧಾರದಲ್ಲಿ ಶ್ರೀರಾಮುಲು ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದೇವೆ ಮತ್ತು ಈ ವಿಡಿಯೋ ಪ್ರಸಾರಕ್ಕೆ ನೀಡಿದ್ದ ತಡೆಯನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿರುವುದಾಗಿ ಕಪಿಲ್ ಸಿಬಲ್ ತಿಳಿಸಿದ್ದಾರೆ.

ಶ್ರೀರಾಮುಲು ಅವರನ್ನು ಸ್ಪರ್ಧೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಎಂದರು.

ಶ್ರೀರಾಮುಲು ಅವರು ಮೊಳಕಾಲ್ಮೂರು ಮತ್ತು ಬದಾಮಿ ವಿಧಾನಸಭೆ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

Comments are closed.