ರಾಷ್ಟ್ರೀಯ

ಪತಿಯ ಕೊಲೆ ಮಾಡಿ 3 ತುಂಡರಿಸಿದ ಗೋವಾ ಮಹಿಳೆ: 4 ಜನ ಪ್ರಿಯತಮರೊಂದಿಗೆ ಹೆಣ ಸಾಗಿಸಿದ ಕಿರಾತಕಿ

Pinterest LinkedIn Tumblr


ಮಾರ್ಗೋವಾ/ಕ್ವೆಪೆ : ಕರ್ನಾಟಕದ ಬೈಲಹೊಂಗಲದ 38ರ ಹರೆಯದ ತನ್ನ ಪತಿ ಬಸವರಾಜ್‌ ಬಾರಿಕಿ ಎಂಬಾತನನ್ನು ಸ್ಕೆಚ್‌ ಹಾಕಿ ಕುಚೋರಿಂ ನಲ್ಲಿ ಫ್ಲಾಟ್‌ ಒಂದರಲ್ಲಿ ಕೊಲೆಗೈದ ಆರೋಪದ ಮೇಲೆ 30ರ ಹರೆಯದ ಕಲ್ಪನಾ ಬಾರಿಕಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪತಿಯನ್ನು ಕೊಂದ ಬಳಿಕ ಆತನ ಮೃತ ದೇಹವನ್ನು ಪತ್ನಿ ಕಲ್ಪನಾ ತನ್ನ ನಾಲ್ವರು ಲವ್ವರ್‌ ಗಳ ನೆರವಿನಲ್ಲಿ ಮೂರು ತುಂಡು ಮಾಡಿ ಗೋಣಿ ಚೀಲದಲ್ಲಿ ಅವುಗಳನ್ನು ತುಂಬಿ ಗೋವಾ-ಕರ್ನಾಟಕ ಗಡಿಯಲ್ಲಿನ ಅನ್‌ಮೋಡ್‌ ಘಾಟ್‌ ಪ್ರದೇಶದ ಮೂರು ವಿಭಿನ್ನ ತಾಣಗಳಲ್ಲಿ ಎಸೆದು ವಿಲೇವಾರಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಪ್ರಿಲ್‌ 1ರಂದು ನಡೆದ ಈ ಕೊಲೆ ಕೃತ್ಯದ ಪ್ರತ್ಯಕ್ಷದರ್ಶಿಯೋರ್ವ ಎರಡು ದಿನಗಳ ಹಿಂದಷ್ಟೇ ಧೈರ್ಯವಹಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಇಲ್ಲದಿದ್ದರೆ ಈ ಕೊಲೆ ಕೃತ್ಯವು ಯಾರ ಗಮನಕ್ಕೂ ಬಾರದೇ ಮುಚ್ಚಿಹೋಗುವ ಎಲ್ಲ ಸಾಧ್ಯತೆ ಇತ್ತು ಎನ್ನಲಾಗಿದೆ.

ಮೃತ ವ್ಯಕ್ತಿಯ ಕುಟುಂಬದ ಯಾವುದೇ ಸದಸ್ಯ ಗೋವೆಯಲ್ಲಿ ನೆಲೆಸಿಲ್ಲವಾದ್ದರಿಂದ ಮೃತ ವ್ಯಕ್ತಿ ಬಸವರಾಜ್‌ ಅದೃಶ್ಯವಾಗಿದ್ದುದು ಯಾರ ಗಮನಕ್ಕೂ ಬರುವ ಸಾಧ್ಯತೆ ಇರಲಿಲ್ಲ. ಹಾಗೆಯೇ ವ್ಯಕ್ತಿ ನಾಪತ್ತೆಯಾದ ಬಗ್ಗೆ ಪೊಲೀಸರಲ್ಲಿ ಯಾವುದೇ ದೂರು ಕೂಡ ದಾಖಲಾಗಿರಲಿಲ್ಲ.

ಬಸವರಾಜ್‌ ಕೊಲೆಯು ಸಂಪೂರ್ಣವಾಗಿ ಆತನ ಪತ್ನಿಯ ಅನೈತಿಕ ಸಂಬಂಧದ ಫ‌ಲಶ್ರುತಿಯಾಗಿದೆ ಎಂದು ದಕ್ಷಿಣ ಗೋವಾ ಎಸ್‌ಪಿ ಅರವಿಂದ ಗವಾಸ್‌ ಹೇಳಿದ್ದಾರೆ.

ಬಸವರಾಜ್‌ ಕೊಲೆಗೆ ಮತ್ತು ಆತನ ಮೃತ ದೇಹವನ್ನು ವಿಲೇವಾರಿ ಮಾಡಲು ನೆರವಾದ ಎಲ್ಲ 4 ಮಂದಿಯೊಂದಿಗೆ ಆತನ ಪತ್ನಿ ಕಲ್ಪನಾಗೆ ಅನೈತಿಕ ಸಂಬಂಧ ಇತ್ತು. ಇವರೆಲ್ಲರೂ ಜತೆಗೂಡಿ ಬಸವರಾಜ್‌ನನ್ನು ಮುಗಿಸಿ ಬಿಡುವ ಸ್ಕೆಚ್‌ ಹಾಕಿದ್ದರು.

ಉತ್ತರ ಗೋವೆಯಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ ಬಸವರಾಜ್‌ ಹದಿನೈದು ದಿನಗಳಿಗೊಮ್ಮೆ ಮನೆಗೆ ಬರುತ್ತಿದ್ದ. ಪತ್ನಿಗೆ ಅನೈತಿಕ ಸಂಬಂಧ ಇರುವ ಬಗ್ಗೆ ಶಂಕೆ ಹೊಂದಿದ್ದ ಆತ ಆಕೆಯೊಂದಿಗೆ ಆಗೀಗ ಎಂಬಂತೆ ಜಗಳ ತೆಗೆಯುತ್ತಿದ್ದ ಎಂದು ಕಲ್ಪನಾಳನ್ನು ತನಿಖೆಗೆ ಗುರಿಪಡಿಸಿ ಮಾಹಿತಿ ಕಲೆ ಹಾಕಿರುವ ಗವಾಸ್‌ ಹೇಳಿದರು.

ಪತಿ ಬಸವರಾಜ್‌ ಕೊಲೆಗೆ ನೆರವಾದ ಪತ್ನಿ ಕಲ್ಪನಾಳ ನಾಲ್ವರು ಸಹವರ್ತಿಗಳ ಪೈಕಿ ಮೂವರಾದ ರಾಜಸ್ಥಾನದ ಸುರೇಶ್‌ ಕುಮಾರ್‌, ಮಾರ್ಗೋವಾದ ಆಕ್ವೇಮ್‌ ನ ಪಂಕಜ್‌ ಪವಾರ್‌ ಮತ್ತು ಕುಚೋರಿಂ ಕಾಕೋಡ ದ ಅಬ್ದುಲ್‌ ಶೇಖ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ.

ಪತಿ ಬಸವರಾಜ್‌ ತನ್ನೊಂದಿಗೆ ಜಗಳ ತೆಗೆದ ಎಪ್ರಿಲ್‌ 1ರಂದು ಕಲ್ಪನಾ ಆತನನ್ನು ಕೊಲ್ಲುವ ಸ್ಕೆಚ್‌ ಹಾಕಲು ತನ್ನ ಐವರು ಸಹವರ್ತಿಗಳನ್ನು ತನ್ನ ಫ್ಲಾಟಿಗೆ ಕರೆಸಿಕೊಂಡು ಪ್ಲಾನ್‌ ಹಾಕಿದ್ದಳು. ಅಂತೆಯೇ ಕೊಲೆಗೀಡಾದ ಬಸವರಾಜ್‌ನ ಮೃತ ದೇಹವನ್ನು ಅವರು ಮೂರು ತುಂಡು ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ, ಮೂರು ಪ್ರತ್ಯೇಕ ತಾಣಗಳಲ್ಲಿ ಎಸೆದು ವಿಲೇವಾರಿ ಮಾಡಿದರು. ಈ ಕೃತ್ಯಕ್ಕೆ ಬಳಸಲಾದ ವಾಹನವನ್ನು ಪೊಲೀಸರು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ.

Comments are closed.