ರಾಷ್ಟ್ರೀಯ

ತಮಿಳುನಾಡಿಗೆ ಲೆಕ್ಕಕ್ಕಿಂತ ಹೆಚ್ಚು ನೀರು: ಕರ್ನಾಟಕ

Pinterest LinkedIn Tumblr

ಸುಭಾಷ್‌ ಹೂಗಾರ

ಹೊಸದಿಲ್ಲಿ: ತಮಿಳುನಾಡಿಗೆ ನಿಗದಿತ 100.04 ಟಿಎಂಸಿ ಬದಲಿಗೆ 116.697 ಟಿಎಂಸಿ ಅಡಿ ಕಾವೇರಿ ನೀರು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕವು ಸೋಮವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ರಾಜ್ಯವೇ ನೀರಿನ ಕೊರತೆ ಎದುರಿಸುತ್ತಿದ್ದರೂ ಸಂಕಷ್ಟ ಸೂತ್ರವನ್ನು ಅನ್ವಯಿಸಿ ಹೆಚ್ಚುವರಿ ನೀರು ಕೊಟ್ಟಿದ್ದಾಗಿ ಕರ್ನಾಟಕ ಹೇಳಿದೆ.

ಮೇ 3ರಂದು ನಡೆದ ವಿಚಾರಣೆಯ ವೇಳೆ ತಮಿಳುನಾಡಿಗೆ ಎಷ್ಟು ನೀರು ಬಿಡಲಾಗಿದೆ ಎಂದು ಮೇ 7ರಂದು ತಿಳಿಸುವಂತೆ ಸುಪ್ರೀಂಕೋರ್ಟ್‌ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಈ ನಡುವೆ, ಕರ್ನಾಟಕದ ವಾದವನ್ನು ಒಪ್ಪದ ತಮಿಳುನಾಡು, 4 ಟಿಎಂಸಿ ನೀರು ಹರಿಸುವಂತೆ ಸೂಚಿಸಿ ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತು. ಕಾವೇರಿ ನೀರು ಹಂಚಿಕೆಗಾಗಿ ‘ಸ್ಕೀಂ’ ರಚನೆಗೆ ಇನ್ನಷ್ಟು ಸಮಯ ಬೇಕು ಎಂದು ಕೇಂದ್ರ ಸರಕಾರ ಹೇಳಿತು.

ಕಾವೇರಿ ನದಿ ನೀರಿನ ಹಂಚಿಕೆ ನಿರ್ವಹಣೆಗಾಗಿ ‘ಸ್ಕೀಂ’ ರಚಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಬೇಡಿಕೊಂಡಿದೆ.

”ಸ್ಕೀಂ ರಚನೆ ಕುರಿತಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಪ್ರಧಾನಿ ಮತ್ತು ಸಚಿವ ಸಂಪುಟದ ಅನೇಕ ಸಚಿವರು ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ವ್ಯಸ್ತವಾಗಿರುವುದರಿಂದ ಅದಕ್ಕೆ ಸಂಪುಟದ ಒಪ್ಪಿಗೆ ಪಡೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೂ 10 ದಿನ ಕಾಲಾವಕಾಶ ನೀಡಬೇಕು,” ಎಂದು ಕೇಂದ್ರ ಸರಕಾರ ಹೇಳಿದೆ. ಇದರೊಂದಿಗೆ ಕರ್ನಾಟಕದ ಚುನಾವಣೆ ಮುಕ್ತಾಯವಾದ ಬಳಿಕವೇ ತಾನು ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ಸೂಚನೆಯನ್ನು ಸರಕಾರ ರವಾನಿಸಿದೆ.

ಈ ನಡುವೆ, ಕರ್ನಾಟಕ ಸರಕಾರ ಕೂಡ ಸೋಮವಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು, ಸತತ ಮೂರನೇ ವರ್ಷ ಬರಗಾಲವಿದ್ದರೂ ತಮಿಳುನಾಡಿಗೆ 16.66 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ.

”ಕರ್ನಾಟಕ, ಮಳೆ ಕೊರತೆ ಇರುವ ವರ್ಷದಲ್ಲಿ ಏಪ್ರಿಲ್‌ ಅಂತ್ಯಕ್ಕೆ ತಮಿಳುನಾಡಿಗೆ 100.04 ಟಿಎಂಸಿ ನೀರನ್ನು ಹರಿಸಬೇಕು. ಆದರೆ, ಈ ಅವಧಿಗೆ ಕರ್ನಾಟಕದಿಂದ 116.66 ಟಿಎಂಸಿ ನೀರು ಹರಿದಿದೆ ಎಂಬುದು ಕೇಂದ್ರ ಜಲ ಆಯೋಗದ ಬಿಳಿಗುಂಡ್ಲುವಿನಲ್ಲಿ ಅಳವಡಿಸಿರುವ ಜಲಮಾಪನ ಕೇಂದ್ರದಲ್ಲಿ ದಾಖಲಾಗಿದೆ,” ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಮಳೆಯ ಕೊರತೆ ಇರುವ ವರ್ಷದ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಕ್ರಮವಾಗಿ 1.24 ಟಿಎಂಸಿ ಮತ್ತು 1.22 ಟಿಎಂಸಿ ನೀರನ್ನು ನಾವು ತಮಿಳುನಾಡಿಗೆ ಹರಿಸಬೇಕು. ಆದರೆ, ಮಾರ್ಚ್‌ ತಿಂಗಳಲ್ಲಿ 1.40 ಟಿಎಂಸಿ ಮತ್ತು ಏಪ್ರಿಲ್‌ ತಿಂಗಳಲ್ಲಿ 1.10 ಟಿಎಂಸಿ ನೀರನ್ನು ಈಗಾಗಲೇ ನಾವು ಹರಿಸಿದ್ದೇವೆ.

ಮೇ 1ಕ್ಕೆ ಕಾವೇರಿ ಕಣಿವೆಯ ರಾಜ್ಯದ ನಾಲ್ಕೂ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಕೇವಲ 10.23 ಟಿಎಂಸಿ ಇತ್ತು. ಇದೇ ಸಮಯಕ್ಕೆ ತಮಿಳುನಾಡಿನ ಮೆಟ್ಟೂರು ಜಲಾಶಯವೊಂದರಲ್ಲೇ 9.592 ಟಿಎಂಸಿ ನೀರು ಇರುವುದು ದಾಖಲಾಗಿದೆ. ಆ ರಾಜ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲವೇ ಇಲ್ಲ. ಆದರೆ, ಕರ್ನಾಟಕ ಲಭ್ಯವಿರುವ ಅಲ್ಪಪ್ರಮಾಣದ ನೀರನ್ನು ಬೆಂಗಳೂರು ಸೇರಿದಂತೆ ಇತರ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಬೇಕಿದೆ ಎಂದು ಪ್ರಮಾಣಪತ್ರದಲ್ಲಿ ಕರ್ನಾಟಕ ವಿವರಿಸಿದೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಮೇ 3ರಂದು ತಮಿಳುನಾಡಿಗೆ 4 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ಮೌಖಿಕವಾಗಿ ಆದೇಶಿಸಿತ್ತು. ನೀರಿನ ಕೊರತೆ ಇರುವ ವರ್ಷದಲ್ಲಿ ಆ ರಾಜ್ಯಕ್ಕೆ ಹರಿಸಬೇಕಿರುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ರಾಜ್ಯದಿಂದ ಹರಿಸಲಾಗಿದೆ ಎಂದು ಕರ್ನಾಟಕ ಹೇಳಿದ ನಂತರ ಈ ಬಗ್ಗೆ ಮೇ 8 ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಲಿಖಿತ ಆದೇಶದಲ್ಲಿ ಸೂಚನೆ ನೀಡಿತ್ತು.

ತಮಿಳುನಾಡು ಆಕ್ಷೇಪ

ತಮಿಳುನಾಡು ಕೂಡ ಸೋಮವಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು, ಏಪ್ರಿಲ್‌ ತಿಂಗಳಲ್ಲಿ ಕೊರತೆಯಾಗಿರುವ 1.40 ಟಿಎಂಸಿ ಮತ್ತು ಮೇ ತಿಂಗಳು ಕೊಡಬೇಕಿರುವ 2.50 ಟಿಎಂಸಿ ಸೇರಿದಂತೆ ಒಟ್ಟು 4 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂದು ತಮಿಳನಾಡು ಕೋರಿದರೆ,

ಕರ್ನಾಟಕ ತನ್ನ ಪ್ರಕರಣಗಳಲ್ಲಿ ತಾನೇ ನ್ಯಾಯಾಧೀಶರಂತೆ ವರ್ತಿಸುತ್ತ ಸುಪ್ರೀಂ ಕೋರ್ಟ್‌ನ ಆದೇಶಗಳನ್ನೇ ಉಲ್ಲಂಘಿಸುತ್ತಿದೆ, ತಮಿಳುನಾಡಿನ ಕುಡಿಯುವ ನೀರಿನ ಬೇಡಿಕೆಯನ್ನೂ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ತಮಿಳುನಾಡು, ಕೇಂದ್ರ ಸರಕಾರವೂ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡದೇ ನ್ಯಾಯಾಂಗ ನಿಂದನೆ ಮಾಡುತ್ತಿದೆ ಎಂದು ಸಹ ಆರೋಪಿಸಿದೆ. ಕರ್ನಾಟಕದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ನಡೆಸಿರುವ ಈ ರಾಜಕೀಯದಾಟ ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರುವಂತಿದೆ, ಸ್ಕೀಂ ರಚನೆಗೆ ವಿಧಿಸಲಾಗಿದ್ದ ಗಡುವು ಮಾರ್ಚ್‌ 30ಕ್ಕೇ ಮುಗಿದಿದೆ ಎಂದು ಸಹ ತಮಿಳುನಾಡು ಪ್ರಮಾಣಪತ್ರದಲ್ಲಿ ಹೇಳಿದೆ.

Comments are closed.