ರಾಷ್ಟ್ರೀಯ

ಪಾಕ್ ಬಾಲಕಿ ಭಾರತದಲ್ಲಿ ಸ್ವಚ್ಛತಾ ರಾಯಭಾರಿ

Pinterest LinkedIn Tumblr


ಜಮುಯಿ: ಪಾಕಿಸ್ತಾನದ ಶಾಲಾ ಬಾಲಕಿಯೋರ್ವಳು ಬಿಹಾರದ ಜಮುಯಿ ಜಿಲ್ಲೆಯ ಸ್ವಚ್ಛತಾ ರಾಯಭಾರಿಯಾಗಿದ್ದಾಳೆ. ಇದನ್ನು ಕೇಳಿದರೆ ನಿಮಗೆ ವಿಚಿತ್ರವೆನಿಸಬಹುದು. ಆದರೆ ಇದು ಸತ್ಯ ಸಂಗತಿ. ಜಮುಯಿ ಜಿಲ್ಲಾ ಜಲ ಮತ್ತು ಸ್ವಚ್ಛತಾ ಸಮಿತಿ ಮಾಡಿರುವ ತಪ್ಪೊಂದು ಬಹುದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.

‘ಸ್ವಚ್ಛ ಜಮುಯಿ ಸ್ವಸ್ಥ ಜಮುಯಿ’ ಅಭಿಯಾನದ ಪ್ರಚಾರಾರ್ಥ ಸಿದ್ಧಪಡಿಸಲಾಗಿರುವ ಕೈಪಿಡಿಯ ಮುಖಪುಟದಲ್ಲಿ ಶಾಲಾ ಬಾಲಕಿಯೊಬ್ಬಳ ಭಾವಚಿತ್ರವನ್ನು ಮುದ್ರಿಸಲಾಗಿದೆ. ಅದು ಪಾಕಿಸ್ತಾನದ ಬಾಲಕಿ ಚಿತ್ರವೆಂದು ತಿಳಿದು ಬರುತ್ತಿದ್ದಂತೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಬಾಲಕಿ ಪಾಕಿಸ್ತಾನ ಬಾವುಟದ ಚಿತ್ರ ಬಿಡಿಸುತ್ತಿದ್ದು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ಈ ಚಿತ್ರ ಗೂಗಲ್ ಸರ್ಚ್‌ನಲ್ಲಿ ಕಂಡುಬರುತ್ತಿದ್ದು ಅದರಲ್ಲಾಕೆ ಪಾಕಿಸ್ತಾನ ಧ್ವಜದ ಚಿತ್ರವನ್ನು ಬಿಡಿಸುತ್ತಿರುವುದು ಸ್ಪಷ್ಟವಾಗಿದೆ. ಪಾಕಿಸ್ತಾನದಲ್ಲಿ ಶಿಕ್ಷಣ ಜಾಗೃತಿ ಅಭಿಯಾನ ನಡೆಸಲು ಯುನಿಸೆಫ್ ಈ ಬಾಲಕಿಯ ಚಿತ್ರವನ್ನು ಬಳಸಿಕೊಂಡಿತ್ತು ಎಂದು ಮಾಹಿತಿ ಲಭಿಸಿದೆ. ಈ ಕೈಪಿಡಿಯ 5000ಕ್ಕೂ ಹೆಚ್ಚಿನ ಪ್ರತಿಗಳನ್ನು ಮುದ್ರಿಸಿ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಹಂಚಲಾಗಿದೆ. ಅಷ್ಟೇ ಅಲ್ಲ ಈ ಕೈಪಿಡಿಯ ಆಧಾರದ ಮೇಲೆ ಜಿಲ್ಲೆಯ ಮಕ್ಕಳ ಮಧ್ಯೆ ಸ್ವಚ್ಛತೆಯ ಬಗ್ಗೆ ಹಲವಾರು ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಮಿತಿಯ ಸದಸ್ಯರಲ್ಲೊಬ್ಬರಾಗಿರುವ ರಾಮನಿರಂಜನ್ ಚೌಧರಿ ನಡೆದಿರುವ ತಪ್ಪಿಗೆ ನಾವು ಹೊಣೆಗಾರರಲ್ಲ ಎಂದಿದ್ದಾರೆ. ಇದನ್ನು ಮುದ್ರಿಸಿರುವ ಪಾಟ್ಣಾದ ಸುಪ್ರಭ್ ಎಂಟರ್‌ಪ್ರೈಸಸ್ ಮಾತ್ರ ಸಮಿತಿಯ ಅನುಮೋದನೆ ಮೇರೆಗೆ ಚಿತ್ರವನ್ನು ಬಳಸಿಕೊಳ್ಳಲಾಗಿದೆ ಎನ್ನುತ್ತಿದೆ.

ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

Comments are closed.