ಲಕ್ನೋ: ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ಕೋಮು ಸಾಮರಸ್ಯಕ್ಕೆ ಒಂದು ಉತ್ತಮ ನಿದರ್ಶನವನ್ನು ಹಾಕಿಕೊಟ್ಟಿದೆ.
ಸುಲ್ತಾನ್ಪುರ ಜಿಲ್ಲೆಯ ಬಾಗ್ ಸರಾಯ್ ಗ್ರಾಮದ ನಿವಾಸಿಯಾಗಿರುವ ಮೊಹಮ್ಮದ್ ಸಲೀಂ ಎಂಬವರು ತಮ್ಮ ಮಗಳ ಮದುವೆ ಕರೆಯೋಲೆಯಲ್ಲಿ ಹಿಂದೂ ದೇವರುಗಳ ಪೋಟೋಗಳನ್ನು ಮುದ್ರಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ಮದುವೆ ಕರೆಯೋಲೆಯ ಜತೆಗೆ ಭಗವಾನ್ ರಾಮ ಮತ್ತು ಸೀತೆಯ ಚಿತ್ರವಿರುವ ಕ್ಯಾಲೆಂಡರ್ ಕೂಡ ಹಂಚಿದ್ದಾರೆ.
ಪುತ್ರಿ ಜಹಾನಾ ಬಾನೋ ಳ ಮದುವೆ ಇನ್ವಿಟೇಶನ್ ಕಾರ್ಡ್ ಮತ್ತು ಕ್ಯಾಲೆಂಡರ್ಗಳನ್ನು ಮೊಹಮ್ಮದ್ ಸಲೀಂ ಅವರು ಖುದ್ದಾಗಿ ಎಲ್ಲ ಗ್ರಾಮಸ್ಥರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಹಂಚಿದ್ದಾರೆ.
‘ಹಿಂದೂ ಸಮುದಾಯದ ನನ್ನ ಅನೇಕ ಮಿತ್ರರ ಭಾವನೆಗಳನ್ನು ಗೌರವಿಸುವ ಸಲುವಾಗಿ ನನ್ನ ಮಗಳ ಮದುವೆ ಕಾರ್ಡ್ನಲ್ಲಿ ಹಿಂದೂ ದೇವ-ದೇವತೆಯರ ಚಿತ್ರಗಳನ್ನು ಪ್ರಿಂಟ್ ಮಾಡಿಸಿರುವುದಾಗಿಯೂ, ಜತೆಗೆ ರಾಮ-ಸೀತೆಯ ಚಿತ್ರವಿರುವ ಕ್ಯಾಲೆಂಡರ್ ಹಂಚುತ್ತಿರುವುದಾಗಿಯೂ’ ಮೊಹಮ್ಮದ್ ಸಲೀಂ ಹೇಳಿರುವುದನ್ನು “ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಮೊಹಮ್ಮದ್ ಸಲೀಂ ಅವರು ಈ ವಿಶಿಷ್ಟ ಬಗೆಯ 350ಕ್ಕೂ ಅಧಿಕ ಮದುವೆ ಕಾರ್ಡುಗಳನ್ನು ಮುದ್ರಿಸಿ ಹಂಚಿದ್ದಾರೆ. ಇನ್ನೂ 400 ಕಾರ್ಡುಗಳನ್ನು ಸಾಂಪ್ರದಾಯಿಕ ಮುಸ್ಲಿಂ ಶೈಲಿಯಲ್ಲಿ ಮುದ್ರಿಸಿ ಬಂಧು ಬಾಂಧವರಿಗೆ ಹಂಚಿದ್ದಾರೆ.
ಸಲೀಂ ಅವರು ಹಂಚಿರುವ ಮದುವೆ ಕಾರ್ಡುಗಳಲ್ಲಿ ಹಿಂದೂ ಧರ್ಮದ ಪವಿತ್ರ “ಕಲಶ’ ಚಿಹ್ನೆ, ಬಾಳೆ ಗಿಡ ಚಿತ್ರಗಳೂ ಇರುವುದು ಗಮನಾರ್ಹವಾಗಿದೆ.
-Udayavani
Comments are closed.