ರಾಷ್ಟ್ರೀಯ

40 ಲಕ್ಷ ಉದ್ಯೋಗ ಸೃಷ್ಟಿ, 50 ಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌: ನೂತನ ಟೆಲಿಕಾಂ ನೀತಿಯ ಗುರಿ

Pinterest LinkedIn Tumblr


ಹೊಸದಿಲ್ಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ದೂರಸಂಪರ್ಕ ವಲಯದ ಪುನಶ್ಚೇತನಕ್ಕಾಗಿ ತರಂಗಗುಚ್ಛ ಶುಲ್ಕವೂ ಸೇರಿದಂತೆ ತೆರಿಗೆಗಳ ಸರಳೀಕರಣಕ್ಕೆ ಸರಕಾರ ಮಹತ್ವದ ಹೆಜ್ಜೆಯಿಟ್ಟಿದೆ. 2022ರ ವೇಳೆಗೆ ದೂರಸಂಪರ್ಕ ವಲಯದಲ್ಲಿ 40 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ, ಕನಿಷ್ಠ 50 ಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌ ಸೇವೆ, 5ಜಿ ಸೇವೆಗಳು ಸೇರಿದಂತೆ ನೂತನ ಟೆಲಿಕಾಂ ಕರಡು ನೀತಿಯೊಂದನ್ನು ಸಿದ್ಧಪಡಿಸಿದೆ.

‘ರಾಷ್ಟ್ರೀಯ ಡಿಜಿಟಲ್‌ ಸಂಪರ್ಕ ನೀತಿ 2018’ ಎಂದು ಈ ಕರಡು ನೀತಿಗೆ ಹೆಸರಿಡಲಾಗಿದ್ದು, ಮಂಗಳವಾರ ಇದನ್ನು ಬಹಿರಂಗಪಡಿಸಲಾಗಿದೆ. ಡಿಜಿಟಲ್‌ ಸಂವಹನ ಕ್ಷೇತ್ರದಲ್ಲಿ 2022ರ ವೇಳೆಗೆ 10,000 ಕೋಟಿ ಡಾಲರ್‌ ಬಂಡವಾಳ ಆಕರ್ಷಿಸುವ ಉದ್ದೇಶವನ್ನು ಇದು ಹೊಂದಿದೆ. ಇದಕ್ಕಾಗಿ ನಿಯಂತ್ರಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರಕಾರ ಮುಂದಾಗಿದೆ.

ಲೈಸೆನ್ಸ್‌ ಶುಲ್ಕ, ಸ್ಪೆಕ್ಟ್ರಂ ಬಳಕೆ ಶುಲ್ಕ, ಸಾರ್ವತ್ರಿಕ ಸೇವಾ ಬದ್ಧತೆ ನಿಧಿ ಶುಲ್ಕ (ಯುನಿವರ್ಸಲ್‌ ಸರ್ವಿಸ್‌ ಒಬ್ಲಿಗೇಶನ್‌ ಫಂಡ್‌ ಲೆವಿ)- ಇವೆಲ್ಲವೂ ದೂರಸಂಪರ್ಕ ವಲಯದ ಹೊರೆಯನ್ನು ಹೆಚ್ಚಿಸಿವೆ. ಈ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿಯೂ ನೂತನ ಕರಡು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.

ಎಲ್ಲರಿಗೂ ಬ್ರಾಡ್‌ಬ್ಯಾಂಡ್‌ ಸೌಲಭ್ಯದ ಗುರಿ ಹೊಂದಲಾಗಿದ್ದು, ಡಿಜಿಟಲ್‌ ಸಂವಹನ ಕ್ಷೇತ್ರದಲ್ಲಿ 40 ಲಕ್ಷ ಹೆಚ್ಚುವರಿ ಉದ್ಯೋಗಾವಕಾಶ ಸೃಷ್ಟಿ ಮತ್ತು ಈ ವಲಯದಿಂದ ಜಿಡಿಪಿಗೆ ಬರುವ ಕೊಡುಗೆಯನ್ನು ಶೇ 8ಕ್ಕೆ ಹೆಚ್ಚಿಸುವುದು ನೂತನ ನೀತಿಯ ಗುರಿಯಾಗಿದೆ. ಪ್ರಸ್ತುತ ಒಟ್ಟಾರೆ ಜಿಡಿಪಿಯಲ್ಲಿ ಡಿಜಿಟಲ್‌ ಸಂಪರ್ಕ ವಲಯದ ಕೊಡುಗೆ ಶೇ 6ರಷ್ಟಿದೆ.

ನೂತನ ನೀತಿಯಲ್ಲಿ ಏ 50ರಷ್ಟು ಮನೆಗಳಿಗೆ ಫಿಕ್ಸ್‌ಡ್‌ ಲೈನ್‌ ಬ್ರಾಡ್‌ಬ್ಯಾಂಡ್‌ ಒದಗಿಸುವುದು ಮತ್ತು ಲ್ಯಾಂಡ್‌ಲೈನ್‌ ಪೋರ್ಟೆಬಿಲಿಟಿ ಸೇವೆಗಳನ್ನು ಆರಂಭಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಸಾರ್ವತ್ರಿಕ ಬ್ರಾಡ್‌ಬ್ಯಾಂಡ್‌ ವ್ಯಾಪ್ತಿಯನ್ನು ಹೆಚ್ಚಿಸುವುದಲ್ಲದೆ, 2020ರ ವೇಳೆಗೆ ಪ್ರತಿಯೊಬ್ಬ ಪ್ರಜೆಗೂ ಕನಿಷ್ಠ 50 ಎಂಬಿಪಿಎಸ್‌ ವೇಗದ ಸಂಪರ್ಕ ಹಾಗೂ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ 1 ಜಿಬಿಪಿಎಸ್‌ ವೇಗದ ಸಂಪರ್ಕ ಮತ್ತು 2022ರ ವೇಳೆಗ 10 ಜಿಬಿಪಿಎಸ್‌ ವೇಗದ ಇಂಟರ್‌ನೆಟ್‌ ಒದಗಿಸುವ ಗುರಿ ಹೊಂದಲಾಗಿದೆ.

ಡಿಜಿಟಲ್‌ ಸಂವಹನಗಳ ಸುಲಭ ಲಭ್ಯತೆಗಾಗಿ ‘ಅನುಕೂಲಕರ ಸ್ಪೆಕ್ಟ್ರಂ ಬೆಲೆ ಪದ್ಧತಿ’ ಅಂಗೀಕರಿಸಲೂ ನೂತನ ಕರಡು ನೀತಿ ಶಿಫಾರಸು ಮಾಡಿದೆ. ಪ್ರಸ್ತುತ ತರಂಗ ಗುಚ್ಛಗಳ ದುಬಾರಿ ಬೆಲೆ ಮತ್ತು ಇತರ ವೆಚ್ಚಗಳಿಂದಾಗಿ ದೂರಸಂಪರ್ಕ ಉದ್ಯಮ ಒಟ್ಟು 7.8 ಲಕ್ಷ ಕೋಟಿ ರೂ.ಗಳ ಸಾಲದ ಹೊರೆ ಅನುಭವಿಸುತ್ತಿದೆ.

5ಜಿ ನೆಟ್‌ವರ್ಕ್‌ಗಳಿಗಾಗಿ 3 ಗಿಗಾ ಹರ್ಟ್ಜ್‌ನಿಂದ 24 ಗಿಗಾ ಹರ್ಟ್ಜ್‌ ವರೆಗಿನ ಮಧ್ಯಮ ಬ್ಯಾಂಡ್‌ ಸ್ಪೆಕ್ಟ್ರಂಗಳ ಮರು ಹೊಂದಾಣಿಕೆಯೂ ಕರಡು ನೀತಿಯಲ್ಲಿ ಸೇರಿದೆ.

ಅಧಿಕ ಶಕ್ತಿಯ ಇ-ಬ್ಯಾಂಡ್‌ (71-76/81-86 GHz) ಮತ್ತು ವಿ- ಬ್ಯಾಂಡ್‌ (57-64 MHz) ತರಂಗಗುಚ್ಛಗಳನ್ನು ಅಂತಾರಾಷ್ಟ್ರೀಯ ಪದ್ಧತಿಗೆ ಅನುಗುಣವಾಗಿ ವಾರ್ಷಿಕ ರಾಜಧನದ (ರಾಯಲ್ಟಿ) ಮೇರೆಗೆ ಬ್ಯಾಕ್‌ಹಾಲ್‌ ಸಂಪರ್ಕಗಳಿಗಾಗಿ ಮೈಕ್ರೋವೇವ್‌ ಲಿಂಕ್‌ಗಳನ್ನು ಒದಗಿಸುವುದು ಕೂಡ ಕರಡು ನೀತಿಯಲ್ಲಿ ಸೇರಿದೆ. (ಬ್ಯಾಕ್‌ಹಾಲ್‌ ಸಂಪರ್ಕ= ದೊಡ್ಡ ಗಾತ್ರದ- ಅನ್‌ಎಡಿಟೆಡ್‌- ವೀಡಿಯೋ ಫೈಲ್‌ಗಳನ್ನು ನೆಟ್‌ವರ್ಕ್‌ ಕೇಂದ್ರ ಅಥವಾ ಟಿವಿ ಕೇಂದ್ರಗಳಿಗೆ ರವಾನಿಸಲು ಬಳಸುವ ಸಂಪರ್ಕ ತಂತ್ರಜ್ಞಾನ).

ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ಬಳಸಿಕೊಂಡು ದೇಶವನ್ನು ಅತಿ ವೇಗದಿಂದ ಅಭಿವೃದ್ಧಿಯತ್ತ ಮುನ್ನಡೆಸಲು ಹೊಸ ನೀತಿ ಪೂರಕವಾಗಿದೆ. ವಲಯದ ಮೇಲಿನ ನಿಯಂತ್ರಣವನ್ನು ಸರಳಗೊಳಿಸುವುದರೊಂದಿಗೆ 2022ರ ವೇಳೆಗೆ 10,000 ಕೋಟಿ ರೂ ಬಂಡವಾಳವನ್ನು ಡಿಜಿಟಲ್‌ ಸಂವಹನ ವಲಯಕ್ಕೆ ಆಕರ್ಷಿಸುವ ಗುರಿ ಹೊಂದಲಾಗಿದೆ.

‘ಹೆಚ್ಚಿನ ಬಂಡವಾಳ ಆಕರ್ಷಣೆ, ನ್ಯಾಯಯುತ ಸ್ಪರ್ಧೆಗೆ ಅವಕಾಶ, ಭಾರತೀಯ ನಾಗರಿಕರ ಅವಶ್ಯಕತೆಗಳ ಪೂರೈಕೆಗೂ ಕರಡು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ವಲಯದ ಬಂಡವಾಳ ಬೇಡಿಕೆಯನ್ನು ಪರಿಗಣಿಸಿ, ದೀರ್ಘಾವಧಿ, ಅಧಿಕ ಗುಣಮಟ್ಟದ ಮತ್ತು ಸುಸ್ಥಿರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುತ್ತದೆ’ ಎಂದು ಕರಡು ನೀತಿ ಹೇಳಿದೆ.

ಡಿಜಿಟಲ್‌ ಸಂವಹನ ಸಾಧನಗಳು, ಮೂಲಸೌಕರ್ಯಗಳು ಮತ್ತು ಸೇವೆಗಳ ಮೇಲಿನ ಶುಲ್ಕ ಹಾಗೂ ನಾನಾ ತೆರಿಗೆಗಳ ಸರಳೀಕರಣವನ್ನೂ ಪ್ರಸ್ತಾಪಿಸಲಾಗಿದೆ.

ಹೈಸ್ಪೀಡ್‌ ಬ್ರಾಡ್‌ಬ್ಯಾಂಡ್‌ ಜಾಲ ನಿರ್ಮಾಣಕ್ಕೆ ದೇಶಾದ್ಯಂತ ಭಾರೀ ಪ್ರಮಾಣದ ಆಪ್ಟಿಕಲ್‌ ಫೈಬರ್‌ ಅಳವಡಿಸುವ ರಾಷ್ಟ್ರೀಯ ಬ್ರಾಡ್‌ಬ್ಯಾಂಡ್‌ ಅಭಿಯಾನ ಆರಂಭಿಸುವ ಉದ್ದೇಶವನ್ನೂ ಪ್ರಸ್ತಾಪಿಸಲಾಗಿದೆ.

Comments are closed.