ರಾಷ್ಟ್ರೀಯ

ಪ್ರಧಾನಿ ಮೋದಿ ಫೇಸ್‌ ಬುಕ್‌ ಜನಪ್ರಿಯತೆ ಟ್ರಂಪ್‌ ಗಿಂತ ದುಪ್ಪಟ್ಟು!

Pinterest LinkedIn Tumblr


ಜಿನೇವಾ: ”ಫೇಸ್‌ ಬುಕ್‌ನಲ್ಲಿ ವಿಶ್ವ ನಾಯಕರು” ಕುರಿತಾಗಿ ಬರ್ಸನ್‌ ಕೋಹನ್‌ ಮತ್ತು ವೂಲ್ಫ್ ನಡೆಸಿರುವ ಅಧ್ಯಯನದ ವರದಿಯನ್ನು ಇಂದು ಬುಧವಾರ ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ಇತರ ಅನೇಕ ವಿಶ್ವ ನಾಯಕರಿಗಿಂತ ಸಾಮಾಜಿಕ ಜಾಲ ತಾಣದ ಜನಪ್ರಿಯತೆಯಲ್ಲಿ ಎಷ್ಟೋ ಮುಂದಿರುವುದು ಕಂಡು ಬಂದಿದೆ.

ಅಧ್ಯಯನದಲ್ಲಿ ಕಂಡು ಬಂದಿರುವ ಪ್ರಕಾರ ಫೇಸ್‌ ಬುಕ್‌ನಲ್ಲಿ 43.2 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ಮೋದಿ ವಿಶ್ವ ನಾಯಕರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಟ್ರಂಪ್‌ ಅವರಿಗಿಂತ ಈ ಸಂಖ್ಯೆ ದುಪ್ಪಟ್ಟಿರುವುದು ದೊಡ್ಡ ಸಾಧನೆಯೇ ಆಗಿದೆ.

ಟ್ವಿಟರ್‌ನಲ್ಲಿ ಮೋದಿಗಿಂತ ಮುಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಫೇಸ್‌ ಬುಕ್‌ ನಲ್ಲಿ 23.1 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಈ ಅಧ್ಯಯನವು 2017ರ ಜನವರಿ 1ರಿಂದ ಫೇಸ್‌ ಬುಕ್‌ನಲ್ಲಿ ಸಕ್ರಿಯರಾಗಿರುವ ಸುಮಾರು 650 ವಿಶ್ವ ನಾಯಕರು ಮತ್ತು ವಿದೇಶ ಸಚಿವರ ಚಟುವಟಿಕೆಗಳನ್ನು ವಿಶ್ಲೇಷಿಸಿದೆ. ಅದಕ್ಕಾಗಿ ಫೇಸ್‌ ಬುಕ್‌ ನ ಕ್ರೌಡ್‌ ಟ್ಯಾಂಗಲ್‌ ಸಲಕರಣೆಯನ್ನು ಅದು ಬಳಸಿಕೊಂಡಿದೆ.

ಕಳೆದ ಹದಿನಾಲ್ಕು ತಿಂಗಳಲ್ಲಿ ವಿಶ್ವದ ಎಲ್ಲ ನಾಯಕರ ಪೈಕಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ಫೇಸ್‌ಬುಕ್‌ನಲ್ಲಿ ಗರಿಷ್ಠ ಸಂಖ್ಯೆಯಲ್ಲಿ, ಒಟ್ಟು 204.9 ದಶಲಕ್ಷ ಸಂವಹನಗಳನ್ನು (ಕಮೆಂಟ್ಸ್‌, ಲೈಕ್ಸ್‌ ಮತ್ತು ಶೇರ್ಗಳನ್ನು ಒಳಗೊಂಡಂತೆ) ನಡೆಸಿರುವುದು ಅತೀ ದೊಡ್ಡ ದಾಖಲೆಯಾಗಿದೆ.

ಪ್ರಧಾನಿ ಮೋದಿ ಅವರ ಫೇಸ್‌ ಬುಕ್‌ ಸಂವಹನ ಸಂಖ್ಯೆಯು 113.6 ದಶಲಕ್ಷ ಆಗಿದ್ದು ಇದರ ದುಪ್ಪಟ್ಟಿಗಿಂತಲೂ ಹೆಚ್ಚು ಟ್ರಂಪ್‌ ಅವರ ದಾಖಲೆಯಾಗಿದೆ.

ಇಂಡೋನೇಶ್ಯದ ಅಧ್ಯಕ್ಷ ಜೋಕೋ ವಿದೋದೋ ನಡೆಸಿರುವ ಫೇಸ್‌ ಬುಕ್‌ ಸಂವಹನ 46 ದಶಲಕ್ಷ; ಕಾಂಬೋಡಿಯದ ಪ್ರಧಾನಿ ಸಮದೇಚ್‌ ಹುನ್‌ ಸೆನ್‌ ಮತ್ತು ಆರ್ಜೆಂಟೀನಾ ಅಧ್ಯಕ್ಷ ಮಾರಿಶಿಯೋ ಮ್ಯಾಕ್ರಿ ನಡೆಸಿರುವ ಫೇಸ್‌ ಬುಕ್‌ ಸಂವಹನಗಳು ಅನುಕ್ರಮವಾಗಿ 36 ಮತ್ತು 33.4 ದಶಲಕ್ಷ ಸಂಖ್ಯೆಯಲ್ಲಿ ದಾಖಲಾಗಿವೆ.

-ಉದಯವಾಣಿ

Comments are closed.