ರಾಷ್ಟ್ರೀಯ

ಪತ್ರಕರ್ತ ಜೆ-ಡೇ ಕೊಲೆ ಪ್ರಕರಣ: ಭೂಗತ ಪಾತಕಿ ಛೋಟಾ ರಾಜನ್ ಗೆ ಜೀವಾವಧಿ ಶಿಕ್ಷೆ!

Pinterest LinkedIn Tumblr

ಮುಂಬೈ: ಖ್ಯಾತ ಅಪರಾಧ ತನಿಖಾ ಪತ್ರಕರ್ತ ಜ್ಯೋತಿರ್ಮಯಿ ಡೇ ಅವರ ಹತ್ಯೆ ಪ್ರಕರಣ ಸಂಬಂಧ ಬುಧವಾರ ಮುಂಬೈ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ್ದು, ದೋಷಿ ಭೂಗತ ಪಾತಕಿ ಛೋಟಾ ರಾಜನ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಮುಂಬೈನ ಎಂಕೋಕಾ ನ್ಯಾಯಾಲಯ ಇಂದು ಮಧ್ಯಾಹ್ನ ತನ್ನ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ್ದು, ಛೋಟಾ ರಾಜನ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಂತೆಯೇ ಪ್ರಕರಣದ ಇತರೆ 9 ಮಂದಿ ಆರೋಪಿಗಳ ಪೈಕಿ 7 ಮಂದಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಅವರಿಗೂ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ. ಆರೋಪಿಗಳಾಗಿದ್ದ ಸತೀಶ್ ಕಾಳ್ಯಾ, ಅನಿಲ್ ವಾಗ್ಮೋಡ್, ಅರುಣ್ ದಾಖೆ, ಮಂಗೇಶ್ ಆಗವಾಣೆ, ಸಚಿನ್ ಗಾಯಕ್ವಾಡ್, ಅಭಿಜಿತ್ ಶಿಂಡೆ, ನೀಲೆಶ್ ಶೆಂಗ್ಡೆ, ದೀಪಕ್ ಸಿಸೋಡಿಯಾ ಮುಂತಾದವರು ಶಿಕ್ಷೆಗೊಳಗಾದ ಇತರ ಆರೋಪಿಗಳಾಗಿದ್ದು, ಇದೇ ಪ್ರಕರಣದ ಆರೋಪಿಯಾಗಿದ್ದ ಪತ್ರಕರ್ತ ಜಿಗ್ನಾ ವೋರಾ ಅವರನ್ನು ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆ ಹಿನ್ನಲೆಯಲ್ಲಿ ಖುಲಾಸೆಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಮೀರ್ ಅದ್ಕರ್ ಅವರು, ಪ್ರಕರಣದ ಮತ್ತೋರ್ವ ಆರೋಪಿ ಪಾಲ್ಸನ್ ಜೋಸೆಫ್ ರನ್ನು ಕೂಡ ಖುಲಾಸೆಗೊಳಿಸಿದೆ. ಪಾಲ್ಸನ್ ಜೋಸೆಫ್ ಛೋಟಾ ರಾಜನ್ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.

2011ರ ಜೂನ್ 9ರಿಂದ ಜೂನ್ 18ರವರೆಗೆ ಜಿಗ್ನಾ ವೋರಾ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ರಜೆಯಲ್ಲಿ ತೆರಳುವುದಾಗಿ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. 2011ರ ಜೂನ್ 11ರಂದು ಬೈಕ್‌ನಲ್ಲಿ ತೆರಳುತ್ತಿದ್ದ ಡೇ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇನ್ನು ಪತ್ರಕರ್ತ ಜೇಡೇ ಭೂಗತ ಜಗತ್ತಿನ ತಮ್ಮ ವರದಿಗಳಿಂದಲೇ ಖ್ಯಾತಿ ಪಡೆದಿದ್ದರು. ಅಲ್ಲದೇ ಇದೇ ಭೂಗತ ಜಗತ್ತಿನ ಕುರಿತಂತೆ ಜೇಡೇ ಬರೆದಿದ್ದ ಎರಡು ಪ್ರಸ್ತುಕಗಳು ಪಾತಕಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಜೇಡೇ ಖಲ್ಲಾಸ್ (Khallas: An A to Z Guide to the Underworld) ಎಂಬ ಪುಸ್ತಕ, Zero Dial: The Dangerous World of Informers, Chindi: Rags to Riches ಎಂಬ ಪುಸ್ತಕಗಳನ್ನು ಬರೆದಿದ್ದರು. ಈ ಪೈಕಿ ಮೂರನೇ ಪುಸ್ತಕ Chindi: Rags to Riches ಅನ್ನು ಪೂರ್ಣಗೊಳಿಸುವುದುಕ್ಕೂ ಮೊದಲೇ ಅವರ ಹತ್ಯೆಯಾಗಿತ್ತು. ಚಿಂದಿ ಪುಸ್ತಕ ಭೂಗತ ಲೋಕದ ಮತ್ತೋರ್ವ ಪಾತಕಿ ಛೋಟಾ ರಾಜನ್ ಕುರಿತಾಗಿತ್ತು ಎಂದು ಹೇಳಲಾಗಿದೆ.

Comments are closed.