ಬರೇಲಿ: ದೃಢ ನಿಶ್ಚಯವೊಂದಿದ್ದರೆ ಯಾವುದು ಕೂಡ ಅಸಾಧ್ಯವಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನವಿದು. ಕೈಯ್ಯಲ್ಲಿ ಪೆನ್ ಅನ್ನೇ ಹಿಡಿಯಲಾಗದ ದೌರ್ಬಲ್ಯತೆಯ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಉತ್ತರ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು 86.6% ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದಾಳೆ. ಈ ಮೂಲಕ ಪ್ರಯತ್ನಕ್ಕೆ ಫಲವಿದೆ ಎಂದು ಸಾರಿದ್ದಾಳೆ.
ಉತ್ತರ ಪ್ರದೇಶದ ಬರೇಲಿಯ ಸರಸ್ವತಿ ವಿದ್ಯಾ ಮಂದಿರ ಇಂಟರ್ ಕಾಲೇಜಿನಲ್ಲಿ ಓದುತ್ತಿರುವ 17 ವರ್ಷದ ಉಮಾರಾಳೇ ಈ ಸಾಧಕಿ. ಕಳೆದ ವರ್ಷ ಜೂನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಉಮಾರಾಳಿಗೆ ವಿಚಿತ್ರ ದೌರ್ಬಲ್ಯ ಕಾಣಿಸಿಕೊಂಡಿತು. ಆಕೆ ಪೆನ್ ಹಿಡಿಯಲು ಮತ್ತು ಬರೆಯಲು ಅಶಕ್ತಳಾದಳು. ದಿಗಿಲುಗೊಂಡ ಪೋಷಕರು ಆಕೆಯನ್ನು ಬರೇಲಿಯ ಖ್ಯಾತ ವೈದ್ಯರ ಬಳಿಗೆಲ್ಲ ಕರೆದೊಯ್ದರು. ಆದರೆ ಆಕೆಯನ್ನು ಬಾಧಿಸುತ್ತಿದ್ದ ಸಮಸ್ಯೆ ಏನೆಂದು ಯಾರಿಂದಲೂ ಪತ್ತೆ ಹಚ್ಚಲಾಗಲಿಲ್ಲ. ಆಕೆಯಿಂದ ಒಂದೇ ಒಂದು ಪದವನ್ನು ಬರೆಯಲಾಗುತ್ತಿರಲಿಲ್ಲ.
ನಾನು ಪೆನ್ ಹಿಡಿಯಲು ಯತ್ನಿಸಿದಾಗಲೆಲ್ಲ ವಿಫಲವಾಗುತ್ತಿದ್ದೆ. ಕೈ ಬೆರಳುಗಳಲ್ಲಿ ಶಕ್ತಿಯೇ ಇರಲಿಲ್ಲ. ಒಂದೇ ಒಂದು ಪದ ಬರೆಯಬೇಕೆಂದರೂ ನಾನು ಹರಸಾಹಸ ಮಾಡಬೇಕಿತ್ತು. ನನ್ನನ್ನು ಬಾಧಿಸುತ್ತಿದ್ದ ಸಮಸ್ಯೆ ಏನೆಂದು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲವಾದ್ದರಿಂದ ವೈದ್ಯರು ನೀಡಿದ ಔಷಧಿಗಳಿಂದೇನೂ ಪ್ರಯೋಜನವಾಗಲಿಲ್ಲ. ತರಗತಿಯಲ್ಲಿ ಏನನ್ನೂ ಬರೆದುಕೊಳ್ಳಲಾಗದೇ ಅಳುತ್ತಿದ್ದೆ. ಆದರೆ ನನ್ನ ಸ್ನೇಹಿತೆಯರು ಬರೆದುಕೊಂಡ ನೋಟ್ಸ್‌ನ ಜೆರಾಕ್ಸ್ ಪ್ರತಿ ನೀಡಿದ ಶಿಕ್ಷಕರು ಎಲ್ಲವೂ ಸರಿಯಾಗುತ್ತದೆ ಎಂದು ಹುರಿದುಂಬಿಸುತ್ತಲೇ ಬಂದರು. ನನ್ನ ಈ ದೌರ್ಬಲ್ಯತೆಯ ನಡುವೆಯೂ ತರಗತಿಯನ್ನು ಮಾತ್ರ ತಪ್ಪಿಸಲಿಲ್ಲ ಎನ್ನುತ್ತಾಳೆ ಉಮಾರಾ.
8 ತಿಂಗಳಾದರೂ ತನ್ನ ಆರೋಗ್ಯದಲ್ಲಿ ಯಾವುದೇ ಧನಾತ್ಮಕ ಬದಲಾವಣೆ ಕಾಣದಾದಾಗ ಉಮಾರಾ ಕಾಲೇಜು ಬಿಡುವ ಆಲೋಚನೆ ಮಾಡಿದ್ದಳು. ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಹೇಗೆ ಬರೆಯುವುದು ಎಂಬುದೇ ಅವಳನ್ನು ಚಿಂತೆಗೀಡು ಮಾಡಿತ್ತು. ಪರೀಕ್ಷೆಗೆ ಕೇವಲ 20 ದಿನಗಳಿದ್ದಾಗ ಆಕೆಯ ಅಣ್ಣ ಹೊಸದೆಲ್ಲಿಯ ಏಮ್ಸ್‌ಗೆ ತಂಗಿಯನ್ನು ಕರೆಯೊಯ್ದ. ಅಲ್ಲಿನ ವೈದ್ಯರು ಆಕೆ ರೈಟರ್ಸ್ ಕ್ರಾಂಪ್ ( ಲೇಖಕರ ಸೆಡೆತ) ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದರು.
ಏಮ್ಸ್ ವೈದ್ಯರು ಕೊಟ್ಟ ಚಿಕಿತ್ಸೆ ಆಕೆಯ ಸ್ಥಿತಿಯಲ್ಲಿ ಸುಧಾರಣೆ ತಂದಿತು. ಆದರೆ ವರ್ಷಪೂರ್ತಿ ಆಕೆ ಬರೆಯಲಿಲ್ಲವಾದ್ದರಿಂದ ಬರವಣಿಗೆ ವೇಗ ಕುಂಠಿತವಾಗಿತ್ತು. ಹೀಗಾಗಿ ಪ್ರತಿಯೊಂದು ವಿಷಯದ ಪರೀಕ್ಷೆಯಲ್ಲಿ ಆಕೆ 2, 3 ಪ್ರಶ್ನೆಗಳಿಗೆ ಉತ್ತರವನ್ನು ಬರೆಯಲು ಸಾಧ್ಯವಾಗಲಿಲ್ಲ. ಆದರು ಕೂಡ 86.6% ಅಂಕ ಗಳಿಸುವಲ್ಲಾಕೆ ಸಫಲಳಾದಳು.
ರೈಟರ್ಸ್ ಕ್ರಾಂಪ್ ಕಾಯಿಲೆಯ ನಡುವೆಯೂ ತಾನು ಇಷ್ಟು ಅಂಕವನ್ನು ಪಡೆಯಲು ಸಾಧ್ಯವಾಗಿದ್ದು ಉಮಾರಾಳ ಉತ್ಸಾಹವನ್ನು ಇಮ್ಮಡಿಸಿದ್ದು ಮತ್ತಷ್ಟು ಸಾಧನೆಯ ಹಂಬಲ ಆಕೆಯದು.
Comments are closed.