ರಾಷ್ಟ್ರೀಯ

ಮದುವೆಯಾಗ ಹೊರಟವ ಮಸಣ ಸೇರಿದ

Pinterest LinkedIn Tumblr


ಮದುವೆ ದಿಬ್ಬಣದ ಕಾರಿಗೆ ಟ್ರಕ್‌ ಡಿಕ್ಕಿ ಹೊಡೆದು ವರ, ನಾಲ್ವರು ಪುಟ್ಟ ಹೆಣ್ಣುಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ನರೋರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಬ್ರಿಮೋನ್‌ ಕೋಲ್‌ (22) ಅವರ ಮದುವೆಗೆ ಅಮಿಲಿಯಾ ಗ್ರಾಮದಲ್ಲಿ ವ್ಯವಸ್ಥೆಯಾಗಿತ್ತು. ಮದುಮಗನ ದಿರಿಸಿನಲ್ಲಿ ಅವರು ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ. ಚಾಲಕನೂ ಮೃತಪಟ್ಟಿದ್ದಾನೆ. ಅಪಘಾತ ಎಷ್ಟೊಂದು ಗಂಭೀರವಾಗಿತ್ತೆಂದರೆ ಟ್ರಕ್‌ನಿಂದ ಕಾರನ್ನು ಪ್ರತ್ಯೇಕಿಸಲು ಜೆಸಿಬಿ ಯಂತ್ರವನ್ನೇ ತರಿಸಬೇಕಾಯಿತು. ಘಟನೆಯಲ್ಲಿ ಇತರ ಇಬ್ಬರು ಮಕ್ಕಳು ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ.

12 ಮಂದಿ ದುರ್ಮರಣ

ಲಖಿಂಪುರ ಖೇರಿ (ಉತ್ತರ ಪ್ರದೇಶ): ಶನಿವಾರ ಬೆಳಗಿನ ಜಾವ ಇಲ್ಲಿನ ರಾಷ್ಟ್ರೀಯ ಹೆದ್ದಾರಿ-24ರಲ್ಲಿ ವ್ಯಾನೊಂದು ಟ್ರಕ್ಕಿಗೆ ಡಿಕ್ಕಿ ಹೊಡೆದು 12 ಮಂದಿ ದುರ್ಮರಣಕ್ಕೀಡಾಗಿದದ್ದಾರೆ. ವ್ಯಾನಿನಲ್ಲಿ 16 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಉಚಾವುಲಿಯಾ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಷಹಜಹಾನ್‌ಪುರದಿಂದ ಸೀತಾಪುರಕ್ಕೆ ವಿಪರೀತ ವೇಗದಿಂದ ಹೋಗುತ್ತಿದ್ದ ವ್ಯಾನ್‌ ರಸ್ತೆ ಬದಿಯ ಉಪಾಹಾರ ಗೃಹದ ಸಮೀಪ ಟ್ರಕ್ಕಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ವ್ಯಾನ್‌ ಚಾಲಕ ಹಾಗೂ ಕ್ಲೀನರ್‌ ಸೇರಿದಂತೆ 9 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಮೂವರು ಷಹಜಹಾನ್‌ಪುರ ಆಸ್ಪತ್ರೆಗೆ ಸಾಗಿಸಿದ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದರು. ಮೂರು ತಿಂಗಳು ಮತ್ತು ಒಂದು ವರ್ಷದ ಎರಡು ಕಂದಮ್ಮಗಳು ಪವಾಡಸದೃಶ ರೀತಿಯಲ್ಲಿ ಪಾರಾಗಿವೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Comments are closed.