ರಾಷ್ಟ್ರೀಯ

ಪುದುಚೇರಿ ಬಯಲು ಶೌಚ, ಕಸ ಮುಕ್ತ ಆಗುವ ತನಕ ಉಚಿತ ಅಕ್ಕಿ ಇಲ್ಲ: ಬೇಡಿ

Pinterest LinkedIn Tumblr


ಪುದುಚೇರಿ: ”ಪುದುಚೇರಿಯನ್ನು ಬಯಲು ಶೌಚ ಮತ್ತು ಕಸ ಮುಕ್ತ ಮಾಡುವ ಉಚಿತ ಅಕ್ಕಿ ಪೂರೈಕೆಯನ್ನು ನಿಲ್ಲಿಸಲಾಗುವುದು” ಎಂದು ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಖಡಾಖಂಡಿತವಾಗಿ ಹೇಳಿದ್ದಾರೆ.

”ಇನ್ನು ಉಚಿತ ಅಕ್ಕಿಯನ್ನು ಪೂರೈಸಬೇಕಾದರೆ ಸ್ಥಳೀಯಾಡಳಿತೆಗಳು ತಮ್ಮ ವ್ಯಾಪ್ತಿಯೊಳಗಿನ ಗ್ರಾಮಗಳು ಬಯಲು ಶೌಚ ಮತ್ತು ಕಸ ಮುಕ್ತವಾಗಿರುವ ಬಗ್ಗೆ ಪ್ರಮಾಣ ಪತ್ರ ನೀಡಬೇಕು” ಎಂದು ಕಿರಣ್‌ ಬೇಡಿ ಟ್ವಿಟರ್‌ನಲ್ಲಿ ಖಡಕ್‌ ಆಗಿ ಹೇಳಿದ್ದಾರೆ. ಇದಕ್ಕಾಗಿ ಆಕೆ ಮೇ 31ರ ವರೆಗಿನ ನಾಲ್ಕು ವಾರಗಳ ಗಡುವನ್ನು ವಿಧಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಪದುಚೇರಿಯ ಅರ್ಧಕ್ಕೂ ಅಧಿಕ ಜನಸಂಖ್ಯೆಗೆ ಉಚಿತ ಅಕ್ಕಿ ಪೂರೈಕೆಯಾಗುತ್ತಿದೆ. ಆದರೆ ಪದುಚೇರಿಯ ಗ್ರಾಮಗಳು ಇನ್ನೂ ಬಯಲು ಶೌಚ ಮತ್ತು ಕಸದಿಂದ ಮುಕ್ತವಾಗಿಲ್ಲ. ಅಂತಿರುವಾಗ ಇನ್ನು ಮುಂದೆ ಉಚಿತ ಅಕ್ಕಿ ಪಡೆಯಲು ಸ್ಥಳೀಯಾಡಳಿತೆಗಳು ತಮ್ಮ ವ್ಯಾಪ್ತಿಯ ಗ್ರಾಮಗಳನ್ನು ಕಡ್ಡಾಯವಾಗಿ ಬಯಲು ಶೌಚ ಮತ್ತು ಕಸ ಮುಕ್ತ ಮಾಡಬೇಕಿವೆ. ಆ ಬಗ್ಗೆ ಅವು ಪ್ರಮಾಣ ಪತ್ರ ನೀಡಿದಲ್ಲಿ ಮಾತ್ರವೇ ಉಚಿತ ಅಕ್ಕಿ ಪೂರೈಕೆಯನ್ನು ಮಾಡಲಾಗುವುದು ಎಂದು ಬೇಡಿ ಹೇಳಿದ್ದಾರೆ. ಪುದುಚೇರಿಯ ಎಲ್ಲೆಂದರಲ್ಲಿ ಕಸ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯಗಳು ರಾಶಿ ಬಿದ್ದಿರುವುದು ಕಂಡು ಬರುತ್ತಿವೆ ಎಂದವರು ಹೇಳಿದ್ದಾರೆ.

ಆದರೆ ಕಿರಣ್‌ ಬೇಡಿ ಅವರು ಬಯಲು ಶೌಚ ಮತ್ತು ಕಸ ಮುಕ್ತ ಕಾರ್ಯಾಚರಣೆಯನ್ನು ಒಗ್ಗೂಡಿಸಿರುವುದಕ್ಕೆ ಹಲವರು ಆಕ್ಷೇಪ ಎತ್ತಿದ್ದಾರೆ. “ನಮ್ಮಲ್ಲಿ ಅಕ್ಕಿ ಕೊಳ್ಳಲೇ ದುಡ್ಡಿಲ್ಲ; ಹಾಗಿರುವಾಗ ನಾವು ಶೌಚಾಲಯ ಕಟ್ಟಡಲು ದುಡ್ಡನ್ನು ಎಲ್ಲಿಂದ ತರೋಣ’ ಎಂದು ಪೌರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೆಲವರು ಹಸಿವು ಮತ್ತು ಸ್ವಚ್ಚತೆಯನ್ನು ಎದುರುಬದುರು ಮಾಡಲಾಗದು ಎಂದು ಹೇಳಿದ್ದಾರೆ.

-ಉದಯವಾಣಿ

Comments are closed.