ರಾಷ್ಟ್ರೀಯ

DRI ದಾಳಿ ಬಳಿಕ ದಿಲ್ಲಿ ಜ್ಯುವೆಲ್ಲರ್‌ ಕಟ್ಟಡದಿಂದ ಹಾರಿ ಆತ್ಮಹತ್ಯೆ

Pinterest LinkedIn Tumblr


ಹೊಸದಿಲ್ಲಿ : ತನ್ನ ನಿವಾಸ ಮತ್ತು ಮಳಿಗೆಯ ಮೇಲೆ ಕಂದಾಯ ಗುಪ್ತಚರ ದಳದ ಅಧಿಕಾರಿಗಳಿಂದ ದಾಳಿ ನಡೆದುದನ್ನು ಅನುಸರಿಸಿ ದಿಲ್ಲಿಯ ಜ್ಯುವೆಲ್ಲರ್‌ ಗೌರವ್‌ ಗುಪ್ತಾ ಎಂಬವರು ಕಂದಾಯ ಗುಪ್ತಚರ ನಿದೇಶನಾಲಯ ಕಟ್ಟಡದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು.

ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಗೌರವ್‌ ಗುಪ್ತಾ ಅವರ ದೇಹ ಕಟ್ಟಡದ ಕೆಳಗೆ ನೆಲದಲ್ಲಿ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದುದು ಕಂಡುಬಂತು.

ಕೂಡಲೇ ಅವರನ್ನು ಸಫ್ದರ್‌ಜಂಗ್‌ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಗುಪ್ತಾ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.

ಡಿಆರ್‌ಐ ಗುಪ್ತಚರ ದಳದ ಅಧಿಕಾರಿಗಳು ಹೇಳಿರುವ, ದಾಳಿಯ ಬಳಿಕ ಗುಪ್ತಾ ಅವರನ್ನು ಬಂಧಿಸಿದ್ದೂ ಇಲ್ಲ; ಸಮನ್ಸ್‌ ನೀಡಿದ್ದೂ ಇಲ್ಲ; ಕೇವಲ ಭಯಗ್ರಸ್ತರಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಗೌರವ್‌ ಗುಪ್ತಾ ಅವರ ಸಾವಿನ ಬಗ್ಗೆ ಮ್ಯಾಜಿಸ್ಟೀರಿಯಲ್‌ ತನಿಖೆಗೆ ಆದೇಶಿಸಲಾಗಿದೆ. ಡಿಆರ್‌ಐ ಅಧಿಕಾರಿಗಳು ಗೌರವ್‌ ಗುಪ್ತಾ ಅವರ ವಶದಲ್ಲಿದ್ದ ಒಟ್ಟು 13 ಕೋಟಿ ರೂ. ಮೌಲ್ಯದ ಕಳ್ಳಸಾಗಣೆ ಸರಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

-ಉದಯವಾಣಿ

Comments are closed.