ರಾಷ್ಟ್ರೀಯ

50 ಸಾವಿರ ರೂ.ವಿದ್ಯುತ್ ಬಿಲ್ ಕಟ್ಟುವುದಕ್ಕಾಗಿ ತನ್ನಿಬ್ಬರು ಅಪ್ರಾಪ್ತೆಯರನ್ನು ವೇಶ್ಯಾವಾಟಿಕೆಗೆ ದೂಡಿದ ತಾಯಿ!

Pinterest LinkedIn Tumblr

ಮುಂಬೈ: ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸ್ವತಃ ತಾಯಿಯೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಪ್ರಕರಣವೊಂದನ್ನು ಮುಂಬೈನ ಖೆರ್ ವಾಡಿ ಪೊಲೀಸರು ಬೇಧಿಸಿದ್ದಾರೆ.

ಇಲ್ಲಿನ ಎಸ್‍ಆರ್ ಎ ಕಟ್ಟಡದ ನಿವಾಸಿಯಾಗಿರೋ ಮಹಿಳೆ, ಸುಮಾರು 50,000 ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗದೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ಅಡ್ಡೆಗೆ ದೂಡಲು ಪ್ರಯತ್ನಿಸಿದ್ದಾಳೆ. ಸದ್ಯ ಈಕೆ ಪೊಲೀಸರ ಅತಿಥಿಯಾಗಿದ್ದಾಳೆ.

ಘಟನೆಯ ವಿವರ:
ಖೆರ್ ವಾಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಗದೀಶ್ ಎಂಬವರಿಗೆ ಬಾಂದ್ರಾದಲ್ಲಿ ಮಹಿಳೆಯೊಬ್ಬರು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ. ಈ ವಿಚಾರ ತಿಳಿದ ಕೂಡಲೇ ಪ್ರಕರಣವನ್ನು ಬೇಧಿಸಲು 11 ಮಂದಿ ಸಿಬ್ಬಂದಿಯ ತಂಡವೊಂದನ್ನು ರಚಿಸಿದ್ದಾರೆ. ಹೀಗಾಗಿ ಸೋಮವಾರ ಮಾಹಿತಿ ನೀಡಿದ ವ್ಯಕ್ತಿ ಸೇರಿ 12 ಜನರ ತಂಡ ಮಹಿಳೆಗೆ ಕರೆ ಮಾಡಿ 4 ಹೆಣ್ಣು ಮಕ್ಕಳನ್ನು ಸಪ್ಲೈ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಮಹಿಳೆ 4 ಮಂದಿಗೆ 50,000 ಕೊಡುವಂತೆ ಕೇಳಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಯೇ ಈ ಕುರಿತು ಮಹಿಳೆ ಜೊತೆ ಮಾತುಕತೆ ನಡೆಸಿ 40,000 ಕೊಡುವುದಾಗಿ ಒಪ್ಪಿದ್ದಾರೆ.

ಇತ್ತ ಸಾಯಿ ಪ್ರಸಾದ್ ಹೊಟೇಲಿನಲ್ಲಿ ತನ್ನನ್ನು ಭೇಟಿಯಾಗುವಂತೆ ಮಹಿಳೆ ವ್ಯಕ್ತಿಗೆ ತಿಳಿಸಿದ್ದಾಳೆ. ಮೊದಲೇ ಪ್ಲಾನ್ ಮಾಡಿದಂತೆ ಪೊಲೀಸರ ತಂಡ ಸಮವಸ್ತ್ರ ಧರಿಸದೇ ಸಾಮಾನ್ಯ ಉಡುಪಿನಲ್ಲಿ ಬಂದು ಹೊಟೇಲಿನಲ್ಲಿ ಮಹಿಳೆಗಾಗಿ ಕಾದು ಕುಳಿತಿದ್ದರು. ಇಬ್ಬರು ಯುವತಿಯರ ಜೊತೆ ಮಹಿಳೆ ಬಂದೇ ಬಿಟ್ಟಳು. ಹಾಗೆಯೇ ವ್ಯಕ್ತಿ ಜೊತೆ ಅವರನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾಳೆ.

ಇದೇ ವೇಳೆ ಮಹಿಳೆ ಮುಂಚಿತವಾಗಿ ವ್ಯಕ್ತಿಯಲ್ಲಿ 10,000 ಕೊಡುವಂತೆ ಕೇಳಿದ್ದಾಳೆ. ಈ ಸಂದರ್ಭದಲ್ಲಿ ಸಾಮಾನ್ಯ ಧಿರಿಸಿನಲ್ಲಿ ಬಂದು ಕಾದು ಕುಳಿತಿದ್ದ ತಂಡ ಮಹಿಳೆಯನ್ನು ಹಿಡಿದಿದ್ದಾರೆ. ಹಾಗೆಯೇ ಮಹಿಳೆಯ ಜೊತೆ ಇದ್ದ ಇಬ್ಬರು ಹೆಣ್ಣು ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳ ವಯಸ್ಸು 15 ಮತ್ತು 19 ಆಗಿತ್ತು. ಈ ವೇಳೆ ಅದರಲ್ಲಿ ಓರ್ವ ಹೆಣ್ಣು ಮಗಳು ಸತ್ಯ ಬಾಯ್ಬಿಟ್ಟಿದ್ದಾಳೆ. 50,000 ಕರೆಂಟ್ ಬಿಲ್ ಕಟ್ಟಲು ಸಾಧ್ಯವಾಗದಿದ್ದರಿಂದ ತಾಯಿ ಈ ಕೆಲಸಕ್ಕೆ ನಮ್ಮನ್ನು ತಳ್ಳಿರುವುದಾಗಿ ಹೇಳಿದ್ದಾಳೆ. ಇತ್ತ ಹೆಣ್ಮಕ್ಕಳ ತಾಯಿ ಮಾತ್ರ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಹೆಣ್ಣು ಮಕ್ಕಳನ್ನು ಈ ಕೆಲಸಕ್ಕೆ ದೂಡಬೇಡ ಅಂತ ನಾನು ಅನೇಕ ಬಾರಿಗೆ ಪತ್ನಿಗೆ ಹೇಳಿದ್ದೆ. ಆದ್ರೆ ಆಕೆ ನನ್ನ ಮಾತು ಕೇಳಲಿಲ್ಲ ಅಂತ ಹೆಣ್ಣು ಮಕ್ಕಳ ತಂದೆ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಸದ್ಯ ಆರೋಪಿ ಮಹಿಳೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments are closed.