ರಾಷ್ಟ್ರೀಯ

ಟಾಂಗಾವಾಲಾನೊಬ್ಬ 10,000 ಕೋಟಿ ಆಸ್ತಿ ಒಡೆಯನಾದ, ಅತ್ಯಾಚಾರಗೈದು ಜೈಲು ಪಾಲಾದ

Pinterest LinkedIn Tumblr

 

ಅಜ್ಮೀರ್: ಸಾಮಾನ್ಯ ಟಾಂಗಾವಾಲಾನಾಗಿದ್ದ ವ್ಯಕ್ತಿಯೊಬ್ಬ ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯನಾಗಿ, ವಿಶ್ವಖ್ಯಾತಿ ಪಡೆದು, ಬಳಿಕ ಅತ್ಯಾಚಾರ ಆರೋಪದಲ್ಲಿ ಸಿಲುಕಿ ಜೈಲುಪಾಲಾದ ರೋಚಕ ಕಥೆ ಇದು. ತಪ್ಪದೇ ಓದಿ.

ಹೌದು, ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದ ಆಧ್ಯಾತ್ಮ ಬೋಧಕ ಆಸಾರಾಂ ಬಾಪು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ ನಂತರ ಕಂಬಿ ಸೇರುವಂತಾಯಿತು. ಪ್ರಕರಣದಲ್ಲಿ ಅವರ ತಪ್ಪು ಸಾಬೀತಾಗಿದ್ದು ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ನಿರಪರಾಧಿಯಾಗಿ ಹೊರಬಂದು ಸಾವಿರಾರು ಕೋಟಿ ಸಾಮ್ರಾಜ್ಯವನ್ನು ಮತ್ತೆ ಆಳಬೇಕೆನ್ನುವ ಆತನ ಕನಸೀಗ ನುಚ್ಚುನೂರಾಗಿದೆ. ಖ್ಯಾತಿಯ ಉನ್ನತಿಗೇರಿ, ಸುಖದ ಸುಪ್ಪತ್ತಿಗೆಯಲ್ಲಿ ಮಿಂದೆದ್ದು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಖ್ಯಾತಿಯಿಂದ ಕುಖ್ಯಾತಿಗೆ ಜಾರಿದ ಆಸಾರಾಂ ಬಾಪುವಿನದು ವರ್ಣರಂಜಿತ ಇತಿಹಾಸ.

ದೊರೆತಿರುವ ಆಧಾರಗಳ ಪ್ರಕಾರ ಪಾಕಿಸ್ತಾನದ ಸಿಂಧ ಪ್ರಾಂತ್ಯದ ಬೇರಾನಿ ಎಂಬ ಪುಟ್ಟ ಗ್ರಾಮದಲ್ಲಿ 1941ರಲ್ಲಿ ಹುಟ್ಟಿದ ಆಸಾರಾಂ, ದೇಶ ವಿಭಜನೆಯ ಬಳಿಕ ತನ್ನ ಪೋಷಕರೊಂದಿಗೆ ಅಹಮದಾಬಾದ್ ಗೆ ಬಂದ. ಆತನ ಜನ್ಮ ನಾಮ ‘ಅಸುಮಲ್ ಸಿರುಮಲಾನಿ’ ಎಂದಾಗಿತ್ತು. ಮಣಿನಗರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿದ್ದ ಆತ ನಾಲ್ಕನೇ ತರಗತಿಯಲ್ಲಿದ್ದಾಗ ತಂದೆ ನಿಧನ ಹೊಂದಿದರು. ಅಪ್ಪನ ನಿಧನದ ನಂತರ ಶಾಲೆ ಬಿಟ್ಟ ಅಸುಮಲ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ತಾರುಣ್ಯದ ದಿನಗಳಲ್ಲಿ ಟಾಂಗಾವಾಲಾ ಆಗಿ ಸಹ ಕೆಲಸ ಮಾಡಿದ್ದ ಎಂದು ಹೇಳಲಾಗುತ್ತಿದೆ. ಆ ದಿನಗಳಲ್ಲಿ ಅವರು ನಮ್ಮಂತೆ ಸಾಮಾನ್ಯ ಮನುಷ್ಯರಾಗಿದ್ದರು, ಆಧ್ಯಾತ್ಮಿಕ ಸೆಳೆತದ ಕುರುಹು ಇರಲಿಲ್ಲ ಎಂದು ಅವರ ಜತೆ ಟಾಂಗಾವಾಲಾಗಳಾಗಿ ಕೆಲಸ ಮಾಡಿದ್ದವರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಇದ್ದಕ್ಕಿದ್ದಂತೆ ಒಂದು ದಿನ ಹಿಮಾಲಯದ ಕಡೆಗೆ ಹೆಜ್ಜೆ ಹಾಕಿದ ಅವರು “ಆಧ್ಯಾತ್ಮಿಕ ಅನ್ವೇಷಣೆ”ಯಲ್ಲಿ ತೊಡಗಿದರು. ಅಲ್ಲಿ ಲೀಲಶಹಾ ಬಾಪು ಎಂಬುವರನ್ನು ಗುರುವಾಗಿ ಸ್ವೀಕರಿಸಿ ಆಧ್ಯಾತ್ಮಿಕ ಅಧ್ಯಯನದಲ್ಲಿ ತೊಡಗಿದರು .1964ರಲ್ಲಿ ಆಸಾರಾಂ ಎಂದು ಮರುನಾಮಕರಣ ಮಾಡಿದ ಗುರುಗಳು ನಿನ್ನದೇ ಆದ ಪಥದಲ್ಲಿ ನಡೆದು ಜನರಿಗೆ ಆಧ್ಯಾತ್ಮ ಬೋಧನೆಯನ್ನು ಮಾಡುವಂತೆ ಆದೇಶಿಸಿದರು, ಎಂದು ಸಾಕ್ಷ್ಯಚಿತ್ರವೊಂದು ವಿವರಿಸುತ್ತದೆ.

ಗುರುಗಳ ಆದೇಶದಂತೆ 1970ರಲ್ಲಿ ಸಾಬರಮತಿ ನದಿ ದಡದಲ್ಲಿ ‘ಮೋಕ್ಷ ಕುಟೀರ’ ಎಂಬ ಹೆಸರಿನ ಪುಟ್ಟ ಗುಡಿಸಲು ಕಟ್ಟಿಕೊಂಡು ತನ್ನ ಆಧ್ಯಾತ್ಮಿಕ ಪಥವನ್ನು ಆರಂಭಿಸಿದ ಆಸಾರಾಂ ಬಾಪು ನೋಡನೋಡುತ್ತಿದ್ದಂತೆ ಮೇಲಕ್ಕೇರುತ್ತಾ ಹೋದ. ಪುಟ್ಟ ಗುಡಿಸಲಾಗಿದ್ದ ‘ಮೋಕ್ಷ ಕುಟೀರ’ ದಶಕಗಳು ಜಾರುತ್ತಿದ್ದಂತೆ ಸಂಪೂರ್ಣ ಸೌಲಭ್ಯಗಳನ್ನು ಹೊಂದಿರುವ ಐಷಾರಾಮಿ ಆಶ್ರಮವಾಗಿ ಬೆಳೆದು ನಿಂತಿತು. ರಾಜಸ್ಥಾನದ ಶಾಲಾ ಪುಸ್ತಕಗಳಲ್ಲಿ ಆತನನ್ನು ‘ಸಂತ’ ಎಂದು ಬಣ್ಣಿಸಲಾಗಿದೆ.

ಲಕ್ಷ್ಮಿ ದೇವಿ ಎಂಬಾಕೆಯನ್ನು ಮದುವೆಯಾಗಿರುವ ಆಸಾರಾಂಗೆ ನಾರಾಯಣ ಸಾಯಿ( ಈತ ಸಹ ಜೈಲಿನಲ್ಲಿದ್ದಾನೆ) ಎಂಬ ಮಗ ಮತ್ತು ಭಾರ್ತಿ ದೇವಿ ಎಂಬ ಮಗಳಿದ್ದಾಳೆ.

ಕೇವಲ ನಾಲ್ಕು ದಶಕಗಳಲ್ಲಿ ವಿಶ್ವದಾದ್ಯಂತ 400 ಆಶ್ರಮಗಳನ್ನು ಹೊಂದಿರುವ ಬಾಪು ಒಟ್ಟು ಆಸ್ತಿಯ ಮೊತ್ತ 10ಸಾವಿರ ಕೋಟಿಗಿಂತ ಅಧಿಕ.

2008ರಲ್ಲಿ ಆಶ್ರಮದಲ್ಲಿ ವಾಸಿಸುತ್ತಿದ್ದ ಸೋದರ ಸಂಬಂಧಿಗಳಿಬ್ಬರು ( ದೀಪೇಶ್ ಮತ್ತು ಅಭಿಷೇಕ್ ವಘೇಲಾ) ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾದಾಗ ಆಸಾರಾಂ ಅವರ ಅಧೋಗತಿ ಪ್ರಾರಂಭವಾಯಿತು. ಇವರ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಸಿಐಡಿ ಆಸಾರಾಂ ಅವರ 9 ಅನುಯಾಯಿಗಳ ವಿರುದ್ಧ ಪ್ರಕರಣ ದಾಖಲಿಸಿತು. ತಮ್ಮ ಮಕ್ಕಳು ವಾಮಾಚಾರಕ್ಕೆ ಬಲಿಯಾದರು ಎಂದು ಮೃತರ ಪೋಷಕರು ಆರೋಪಿಸಿದರು.

ಹೀಗೆ 2008ರಲ್ಲಿ ಆಸಾರಾಂ ತಲೆಯ ಮೇಲೆ ಕತ್ತಿ ತೂಗಾಡತೊಡಗಿತು. ಆದರೆ 2013ರಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ ಹೊತ್ತಿಕೊಂಡ ಬಳಿಕ ಅವರ ದುರ್ದೆಸೆ ಇಮ್ಮಡಿಯಾಯಿತು. ಬಳಿಕ ಸೂರತ್ ಮೂಲದ ಸಹೋದರಿಯರಿಬ್ಬರು ಕೂಡ ಆಸಾರಾಂ ಮತ್ತು ಅವರ ಪುತ್ರ ನಾರಾಯಣ ಸಾಯಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದರು. ಈ ಪ್ರಕರಣಗಳಿನ್ನೂ ವಿಚಾರಣೆ ಹಂತದಲ್ಲಿದ್ದು ಅಪ್ರಾಪ್ತೆ ಮೇಲಿನ ಅತ್ಯಾಚಾರ ಆರೋಪ ಸಾಬೀತಾಗಿ ಆಸಾರಾಂಗೆ ಜೀವಾವಧಿ ಶಿಕ್ಷೆಯಾಗಿದೆ.

ಅತ್ಯಾಚಾರ ಅಷ್ಟೇ ಅಲ್ಲ, ಭೂ ಕಬಳಿಕೆ, ಆಶ್ರಮದಲ್ಲಿ ವಾಮಾಚಾರ ನಡೆಸುತ್ತಿದ್ದ ಆರೋಪ ಹೊತ್ತ ಬಳಿಕವೂ ಸಾವಿರಾರು ಅನುಯಾಯಿಗಳನ್ನು ಹೊಂದಿರುವುದು ವಿಶೇಷ. ಅವರೆಲ್ಲ ತಾವು ನಂಬಿರುವ ಸಂತ ಬಾಪು ಮೇಲಿನ ಆರೋಪಗಳು ಸುಳ್ಳು ಎಂದು ವಾದಿಸುತ್ತ ಅವರ ಮೇಲಿನ ನಿಷ್ಠೆಯನ್ನು ಮುಂದುವರೆಸಿದ್ದಾರೆ.

Comments are closed.