ರಾಷ್ಟ್ರೀಯ

ಸಿಜೆಐ ವಿರುದ್ಧ ಮಹಾಭಿಯೋಗ ಗೊತ್ತುವಳಿ ನ್ಯಾಯಾಧೀಶರಿಗೆ ಬೆದರಿಕೆ ಒಡ್ಡುವ ತಂತ್ರ: ಅರುಣ್‌ ಜೇಟ್ಲಿ

Pinterest LinkedIn Tumblr

ನವದೆಹಲಿ: ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಸಲ್ಲಿಸಿದ್ದ ಮಹಾಭಿಯೋಗ ಗೊತ್ತುವಳಿ ಅಸಮರ್ಥನೀಯ ನೆಲೆಗಟ್ಟನ್ನು ಹೊಂದಿದ್ದು, ಅದು ಸಿಜೆಐ ಮತ್ತು ಇತರೆ ನ್ಯಾಯಾಧೀಶರಿಗೆ ಬೆದರಿಕೆ ಒಡ್ಡುವ ಉದ್ದೇಶ ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.

ಸಿಜೆಐ ದೀಪಕ್ ಮಿಶ್ರಾ ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸಲ್ಲಿಸಿದ್ದ ಮಹಾಭಿಯೋಗ ಗೊತ್ತುವಳಿಯನ್ನು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ನಿನ್ನೆ ತಿರಸ್ಕರಿಸಿದ್ದರು.

ಈ ಕುರಿತು ಇಂದು ಫೇಸ್ ಬುಕ್ ನಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅರುಣ್ ಜೇಟ್ಲಿ, ವಕೀಲ ಸಂಸದರು ವಿಭಿನ್ನ ಹಿತಾಸಕ್ತಿಗಳಿಗೆ ನೆರವಾಗುವ ಉದ್ದೇಶದಿಂದ ನ್ಯಾಯಾಲಯಗಳ ನಡುವಿನ ವಿವಾದಗಳನ್ನು ಸಂಸದೀಯ ಪ್ರಕ್ರಿಯೆಯೊಳಗೆ ಎಳೆದು ತರುವ ಪ್ರವೃತ್ತಿ ಹೊಂದಿದ್ದಾರೆ. ಇದಕ್ಕೆ ಮಹಾಭಿಯೋಗದ ತಪ್ಪುಗ್ರಹಿಕೆಯ ಗೊತ್ತುವಳಿಯು ಒಂದು ಜ್ವಲಂತ ಉದಾಹರಣೆಯಾಗಿದೆ ಎಂದಿದ್ದಾರೆ.

ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಸಿಜೆಐ ವಿರುದ್ಧ ಮಹಾಭಿಯೋಗ ಗೊತ್ತುವಳಿ ಮಂಡಿಸಲಾಗುತ್ತದೆ ಮತ್ತು ಪ್ರಬಲ ಸಾಕ್ಷ್ಯಾಧಾರಗಳು ಬೇಕಾಗುತ್ತದೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಸಂಸತ್ತು ತನ್ನದೇ ನ್ಯಾಯೋಚಿತ ಪರಿಮಿತಿಯೊಳಗೆ ಪರಮೋಚ್ಚವಾಗಿದೆ. ಅದರ ಪ್ರಕ್ರಿಯೆಯನ್ನು ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸಲಾಗದು. ವಿರೋಧ ಪಕ್ಷಗಳು ಸಿಜೆಐ ವಿರುದ್ಧ ಸಲ್ಲಿಸಿದ ಮಹಾಭಿಯೋಗ ಗೊತ್ತುವಳಿಯು ಅಸಮರ್ಥನೀಯ ನೆಲೆಗಟ್ಟನ್ನು ಹೊಂದಿದ್ದು ಅದು ಸಿಜೆಐ ಮತ್ತು ಇತರ ನ್ಯಾಯಮೂರ್ತಿಗಳಿಗೆ ಬೆದರಿಕೆ ಒಡ್ಡುವ ಇತರೇ ಉದ್ದೇಶಗಳನ್ನು ಹೊಂದಿದೆ’ ಎಂದು ಜೇಟ್ಲಿ ಆರೋಪಿಸಿದ್ದಾರೆ.

ಈ ಹಿಂದೆಯೂ ಸಂಸತ್‌ ಪ್ರಕ್ರಿಯೆಯನ್ನು ವಿವಿಧ ಬಗೆಯ, ವಿಶೇಷವಾಗಿ ಔದ್ಯಮಿಕ ಹಿತಾಸಕ್ತಿಗಾಗಿ ಸಂಸದರು ದುರುಪಯೋಗಿಸಿಕೊಂಡಿರುವ ಉದಾಹರಣೆಗಳಿವೆ. ಅವುಗಳ ನಗ್ನಸತ್ಯ ಕಾಲಕಾಲದಲ್ಲಿ ಅನಾವರಣಗೊಂಡಿದೆ. ಈಗ ಸಿಜೆಐ ಮತ್ತು ಇತರ ನ್ಯಾಯಮೂರ್ತಿಗಳಿಗೆ ಬೆದರಿಕೆ ಒಡ್ಡುವ ಉದ್ದೇಶ ಇದ್ದುದು ಕೂಡ ಗೊತ್ತಾಗಿದೆ. ವಕೀಲ ಸಂಸದರಲ್ಲಿ ಕೋರ್ಟ್‌ಗಳ ನಡುವಿನ ವಿವಾದವನ್ನು ಸಂಸತ್‌ ಪ್ರಕ್ರಿಯೆಯೊಳಗೆ ಎಳೆದು ತರುವ ಪ್ರವೃತ್ತಿ ಇರುವುದು ಮಹಾಭಿಯೋಗದಲ್ಲಿ ಅಡಕವಾಗಿರುವುದು ಗೊತ್ತಾಗಿದೆ ಎಂದು ಜೇಟ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Comments are closed.