ರಾಷ್ಟ್ರೀಯ

ಮಕ್ಕಳನ್ನು ಶಾಲೆಗೆ ಸೆಳೆಯಲು ಚಿನ್ನದ ನಾಣ್ಯದ ಭಾಗ್ಯ

Pinterest LinkedIn Tumblr


ಚೆನ್ನೈ: ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಹಲವಾರು ಯೋಜನೆ ಜಾರಿಗೆ ತರಲಾಗುತ್ತಿದೆ.

ಬಿಸಿಯೂಟ ಆಯಿತು, ಲ್ಯಾಪ್‌ ಟಾಪ್‌, ಶೂ ಭಾಗ್ಯ ಹೀಗೆ ಬಹುತೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ತಮಿಳುನಾಡಿನಲ್ಲಿ ಈಗ ಹೊಸ ಯೋಜನೆ ಜಾರಿತೆ ತರಲಾಗುತ್ತಿದೆ.

ಅದೇ ಚಿನ್ನದ ನಾಣ್ಯ ಭಾಗ್ಯ.

ಹೌದು ಶಾಲೆಗೆ ಸೇರಿಸುವ ಮಕ್ಕಳಿಗೆ ಚಿನ್ನದ ನಾಣ್ಯ ನೀಡಲಾಗುತ್ತಿದೆ. ತಂಜಾವೂರಿನ ಪೆರುವುರಿನಿ ಸಮೀಪದ ತುಲುಕ್ಕು ವಿದುತಿ ಎಂಬ ಗ್ರಾಮ ಪಂಚಾಯಿತಿ ಈ ಯೋಜನೆ ಜಾರಿಗೆ ತಂದಿದೆ.

ಹೊಸದಾಗಿ ನೋಂದಣಿಯಾಗುವ ವಿದ್ಯಾರ್ಥಿಗೆ ಚಿನ್ನದ ನಾಣ್ಯ ನೀಡಲಾಗುತ್ತದೆ. ವಿದ್ಯಾರ್ಥಿಯ ಪಾಲಕರಿಗೆ 1000 ರೂಪಾಯಿ ಪ್ರೋತ್ಸಾಹ ಧನವನ್ನೂ ವಿತರಿಸಲಾಗುತ್ತಿದೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ, ಪ್ರಾಥಮಿಕ ಶಾಲೆಯನ್ನು ಹೈಸ್ಕೂಲ್‌ ಆಗಿ ಪರಿವರ್ತಿಸಬಹುದು ಎಂಬುದು ಗ್ರಾಮ ಪಂಚಾಯಿತಿ ಅಧಿಕಾರಿಗಳ ಆಶಯವಾಗಿದೆ.

ಎಂಟನೇ ತರಗತಿಯಲ್ಲಿ 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದರೆ ಈ ರೀತಿ ಮಾಡಬಹುದು ಎಂಬ ನಿಯಮ ಇರುವುದರಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ.

ಸದ್ಯ ಈ ಶಾಲೆಯಲ್ಲಿ ಕೇವಲ 10 ವಿದ್ಯಾರ್ಥಿಗಳಿದ್ದರೆ, ಈ ಸಂಖ್ಯೆಯನ್ನು ಹೆಚ್ಚಿಸಲು ಶಾಲಾ ಆಡಳಿತ ಮಂಡಳಿ, ಶಿಕ್ಷಕರು-ಪೋಷಕರ ಒಕ್ಕೂಟ, ಗ್ರಾಮ ಶಿಕ್ಷಣ ಸಮಿತಿ ಪದಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಚಿನ್ನದ ನಾಣ್ಯದ ಭಾಗ್ಯ ಘೋಷಣೆಯಾಗುತ್ತಿದ್ದಂತೆ 15 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಈ 15 ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಚಿನ್ನದ ನಾಣ್ಯ ನೀಡಿ ಸನ್ಮಾನಿಸಲಾಗಿದೆ.

ಈ ಶಾಲೆಯಲ್ಲಿ ಶಿಕ್ಷಣ ಹೇಳಿಕೊಡುವ ಪದ್ಧತಿ ಹಾಗೂ ಶಿಕ್ಷಕರು ಭಾರಿ ಶ್ರಮ ವಹಿಸುತ್ತಿದ್ದಾರೆ. ಪ್ರತಿ ವರ್ಷವೂ ಶಾಲೆಯ ಫಲಿತಾಂಶ ಶೇಕಡ 90 ರಿಂದ 95ರಷ್ಟು ಇರುತ್ತದೆ.

ಪ್ರೈಮರಿಯಲ್ಲಿ 31 ವಿದ್ಯಾರ್ಥಿಗಳಿದ್ದಾರೆ. ಅಪ್ಪರ್‌ ಪ್ರೈಮರಿಯಲ್ಲಿ 49 ವಿದ್ಯಾರ್ಥಿಗಳಿದ್ದಾರೆ.

Comments are closed.