ರಾಷ್ಟ್ರೀಯ

ನಾನೂರು ವರ್ಷಗಳ ನಂತರ ದೇವರ ವಿಗ್ರಹಗಳನ್ನು ಮುಟ್ಟಿದ ಪುರುಷರು !

Pinterest LinkedIn Tumblr

ಒಡಿಶಾ: ಕೇಂದ್ರಪುರ ಜಿಲ್ಲೆಯ ಮಾ ಪಂಚುಬುರಾಹಿ ದೇವಾಲಯದ 5 ದೇವರ ವಿಗ್ರಹಗಳನ್ನು ನಾನೂರು ವರ್ಷಗಳ ನಂತರ ಮೊದಲ ಬಾರಿಗೆ ಮುಟ್ಟಲು ಅವಕಾಶ ಮಾಡಿಕೊಡಲಾಗಿದೆ. ಇದುವರೆಗೂ ದೇಗುಲಕ್ಕೆ ಪುರುಷರು ಪ್ರವೇಶಿಸುವಂತಿರಲಿಲ್ಲ. ದಲಿತ ಮಹಿಳೆಯರು ಮಾತ್ರ ವಿಗ್ರಹಗಳನ್ನು ಮುಟ್ಟಿ ಪೂಜಾ ಕೈಂಕರ್ಯಗಳನ್ನು ಮಾಡಲು ಅವಕಾಶವಿತ್ತು.

ಜಾಗತಿಕ ತಾಪಮಾನ ಹಾಗೂ ಬಂಗಾಳ ಕೊಲ್ಲಿಯಲ್ಲಿ ಸಮುದ್ರ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಶತಮಾನಗಳ ಸಂಪ್ರದಾಯವನ್ನು ಮುರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸತಭಯಾ ಹಳ್ಳಿಯಲ್ಲಿ ಕಾಣಿಸಿಕೊಂಡ ಭಾರಿ ಪ್ರವಾಹದಿಂದಾಗಿ ಏ.20 ರಂದು 5 ಮಂದಿ ದೇಗುಲ ಪ್ರವೇಶಿಸಲು ಮಹಿಳಾ ಅರ್ಚಕರು ಅವಕಾಶ ಮಾಡಿಕೊಟ್ಟಿದ್ದಾರೆ. ಕಪ್ಪು ಶಿಲೆಯಲ್ಲಿ ಕೆತ್ತಿರುವ, ತಲಾ 1.5 ಟನ್ ತೂಗುವ 5 ಭಾರಿ ವಿಗ್ರಹಗಳನ್ನು ಸ್ಥಳಾಂತರಗೊಳಿಸಲು ಪುರುಷರಿಗೆ ಜವಾಬ್ದಾರಿ ವಹಿಸಲಾಗಿತ್ತು. ಹಾಗಾಗಿ ನಾನೂರು ವರ್ಷಗಳಿಂದ ಸ್ಪರ್ಶಿಸದ ವಿಗ್ರಹಗಳನ್ನು ಗಂಡಸರು ಮುಟ್ಟಬೇಕಾಯಿತು.

ಬಾಗಾಪಾಟಿಯಾಗೆ ದೇಗುಲವನ್ನು ಸ್ಥಳಾಂತರಿಸಲಾಗಿದ್ದು, ಅರ್ಚಕರು ಶುದ್ಧಿ ಕಾರ್ಯ ನಡೆಸಿದ್ದಾರೆ. ಈ ದೇವರುಗಳು ನೈಸರ್ಗಿಕ ವಿಪತ್ತಿನಿಂದ ತಮ್ಮನ್ನು ರಕ್ಷಿಸುತ್ತಾರೆ ಎಂಬುದು ಸ್ಥಳೀಯರ ನಂಬಿಕೆ. ವಿವಾಹಿತ ದಲಿತ ಮಹಿಳೆ ಮಾತ್ರ ದೇಗುಲವನ್ನು ಸ್ವಚ್ಛಗೊಳಿಸಿ ನಿತ್ಯ ಪೂಜೆಯನ್ನು ನೆರವೇರಿಸಬೇಕಿತ್ತು. ಇದು ಕಳೆದ ನಾನೂರು ವರ್ಷಗಳಿಂದ ತಪ್ಪದೇ ನಡೆದುಕೊಂಡು ಬರುತ್ತಿತ್ತು.

ಕಳೆದ ಕೆಲವು ದಶಕಗಳಿಂದ ನೀರಿನಮಟ್ಟ ಏರಿಕೆಯಾಗಿ ಬಹುತೇಕ ಗ್ರಾಮ ಮುಳುಗಡೆಯಾಗಿದ್ದು, ಮನೆಗಳು ಹಾಗೂ ಆಸ್ತಿಪಾಸ್ತಿಗಳು ಜಲಾವೃತವಾಗಿವೆ. ಸರ್ಕಾರಿ ದಾಖಲೆಗಳ ಪ್ರಕಾರ, 1930ರಲ್ಲಿ 350 ಚ.ಕಿ.ಮೀ. ಇದ್ದ ಈ ಪ್ರದೇಶ ಈಗ 140 ಚ.ಕಿ.ಮೀ.ಗೆ ಇಳಿದಿದೆ.

Comments are closed.