ರಾಷ್ಟ್ರೀಯ

ವಿದೇಶದಲ್ಲಿ ನಮ್ಮನ್ನು ಲೇವಡಿ ಮಾಡಬೇಡಿ: ಪ್ರಧಾನಿಗೆ ಏಮ್ಸ್‌ ವೈದ್ಯರು

Pinterest LinkedIn Tumblr


ಹೊಸದಿಲ್ಲಿ : “ವೈದ್ಯರು ಔಷಧ ತಯಾರಿ ಕಂಪೆನಿಗಳನ್ನು ಪ್ರೋತ್ಸಾಹಿಸಲು ವಿದೇಶಗಳಲ್ಲಿ ಕಾನ್ಫರೆನ್ಸ್‌ಗಳಲ್ಲಿ ಭಾಗವಹಿಸುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಲಂಡನ್‌ ನಲ್ಲಿ ಹೇಳಿರುವುದನ್ನು ಇಲ್ಲಿನ ಏಮ್ಸ್‌ ಆಸ್ಪತ್ರೆಯ ರೆಸಿಡೆಂಟ್‌ ವೈದ್ಯರ ಸಂಘದ ಡಾಕ್ಟರ್‌ಗಳು ತೀವ್ರವಾಗಿ ಖಂಡಿಸಿದ್ದಾರೆ.

“ಔಷಧ ಉತ್ಪಾದನಾ ಕಂಪೆನಿಗಳ ದುಬಾರಿ ಬೆಲೆಯ ಔಷಧಗಳನ್ನು ಬರೆಯುವ ಮೂಲಕ ವೈದ್ಯರು ಆ ಕಂಪೆನಿಗಳಿಂದ ವಿದೇಶ ಪ್ರವಾಸದ ಕೊಡುಗೆಯನ್ನು ಪಡೆಯುತ್ತಾರೆ’ ಎಂದು ಪ್ರಧಾನಿ ಮೋದಿ ಅವರು ಇಡಿಯ ಭಾರತೀಯ ವೈದ್ಯ ಸಮುದಾಯದವನ್ನು ಅಂತಾರಾಷ್ಟ್ರೀಯ ವೇದಿಕೆಯನ್ನು ಕಳಂಕಕ್ಕೆ ಗುರಿಪಡಿಸಿರುವುದು ನಾಚಿಕೆಗೇಡಿನ ವಿಷಯವಾಗಿದೆ’ ಎಂದು ಏಮ್ಸ್‌ ವೈದ್ಯರು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

“ಭಾರತ ಇಂದು ವೈದ್ಯಕೀಯ ಪ್ರವಾಸೋದ್ಯಮದಿಂದಾಗಿ ಅತ್ಯಧಿಕ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಫಾರ್ಮಾಸುಟಿಕಲ್‌ ಉತ್ಪನ್ನಗಳ ರಫ್ತಿಗೆ ನಾವಿಂದು ವಿಶ್ವದಲ್ಲಿ ನಂಬರ್‌ ಒನ್‌ ಆಗಿದ್ದೇವೆ. ಎಲ್ಲ ವೃತ್ತಿಗಳಲ್ಲಿ ಇರುವಂತೆ ನಮ್ಮ ವೈದ್ಯ ಸಮುದಾಯದಲ್ಲೂ ಕೆಲವರು ಭ್ರಷ್ಟರಿರಬಹುದು. ಹಾಗೆಯೇ ಮೋದಿ ಸರಕಾರದಲ್ಲೂ ಭ್ರಷ್ಟರು ಇರಬಹದು. ಆದರೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ವಿಶ್ವದ ಮುಂದೆ ನಮ್ಮನ್ನು ಸಾರಾಸಗಟು ಕಳಂಕಿತರನ್ನಾಗಿ ಮಾಡುವುದು ಖಂಡನೀಯ. ಪ್ರಧಾನಿ ಮೋದಿಯವರೇ, ದಿನನಿತ್ಯ ನಾವೆಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ತಿಳಿಯಲು ನೀವೊಮ್ಮೆ ವೈದ್ಯ ಸಮವಸ್ತ್ರ ಧರಿಸಿಕೊಂಡು ನಮ್ಮ ಜತೆಗೆ ಒಂದು ದಿನ ಇರಿ. ಆಗ ನಿಮಗೆ ನಮ್ಮ ಕಷ್ಟ ಏನೆಂಬುದು ಗೊತ್ತಾಗುತ್ತದೆ’ ಎಂದು ಏಮ್ಸ್‌ ವೈದ್ಯರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

-ಉದಯವಾಣಿ

Comments are closed.