ರಾಷ್ಟ್ರೀಯ

ಆತ್ಮಹತ್ಯೆ ಮಾಡಿಕೊಂಡ ತಾಯಿಯ ಶವದ ಪಕ್ಕದಲ್ಲಿಯೇ ಮಲಗಿ 3 ದಿನ ಕಳೆದ ಬಾಲಕ !

Pinterest LinkedIn Tumblr

ಚಂಡೀಘಡ: 7 ವರ್ಷದ ಮಗನೊಬ್ಬ ಮೂರು ದಿನಗಳ ಕಾಲ ತಾಯಿಯ ಶವದ ಪಕ್ಕದಲ್ಲಿಯೇ ಮಲಗಿರುವ ಮನಕಲಕುವ ಘಟನೆ ಪಂಜಾಬ್ ರಾಜ್ಯದ ಮೊಹಾಲಿ ಪ್ರಾಂತ್ಯದಲ್ಲಿ ನಡೆದಿದೆ.

ಜಸ್ಪಿಂಧರ್ ಕೌರ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಕೌರ್ ಮನೆಯ ಹಾಲ್ ನಲ್ಲಿರುವ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, 7 ವರ್ಷದ ಮಗ ಅರ್ಮಾನ್ ಮೂರು ದಿನಗಳಿಂದ ತಾಯಿಯ ಶವದ ಪಕ್ಕದಲ್ಲಿದ್ದ ಸೋಫಾ ಮೇಲೆಯೇ ಮಲಗಿದ್ದಾನೆ.

ಅಮ್ಮ ಮೂರು ದಿನಗಳಿಂದ ಫ್ಯಾನಿಗೆ ನೇತಾಡುತ್ತಿದ್ದಾರೆ. ನಾನು ಇಲ್ಲಿಯೇ ಮಲಗಿಕೊಳ್ಳುತ್ತಿದ್ದೆ. ನಾನು ನೇಣು ಹಾಕಿಕೊಳ್ಳುತ್ತಿದ್ದು, ಈ ವಿಷಯವನ್ನು ಯಾರಿಗೂ ತಿಳಿಸಬೇಡ ಅಮ್ಮ ನನಗೆ ಹೇಳಿದ್ದಳು. ನಾನು ಆವಾಗ ಹೀಗೆ ನೀನು ಸತ್ತು ಹೋಗ್ತಿಯಾ ಮಾಡಬೇಡ ಅಂತಾ ಹೇಳಿದ್ರೂ ಅಮ್ಮ ಸತ್ತು ಹೋದ್ಳು ಅಂತಾ ಮಗ ಅರ್ಮಾನ್ ಪೊಲೀಸರಿಗೆ ತಿಳಿಸಿದ್ದಾನೆ.

ಕೌರ್ ಪತಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಸದ್ಯ ಕೌರ್ ಶವವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಪತಿ ಬಂದ ಮೇಲೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿವೆ ಅಂತಾ ಎಸ್‍ಹೆಚ್‍ಓ ರಾಜೀವ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೌರ್ ಸಾವನ್ನಪ್ಪಿದ ಬಳಿಕ ಮೂರು ದಿನಗಳ ನಂತರ ಆಕೆಯ ಗೆಳತಿ ರಣ್‍ಬೀರ್ ಕೌರ್ ಮನೆಗೆ ಆಗಮಿಸಿದ್ದಾರೆ. ಮನೆಯ ಬಾಗಿಲನ್ನು ಅರ್ಮಾನ್ ತೆಗೆದಿದ್ದಾನೆ. ಮನೆಯಿಂದ ಕೆಟ್ಟ ವಾಸನೆ ಬಂದಿದ್ದು, ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದನ್ನು ನೋಡಿದ ರಣ್‍ಬೀರ್ ಒಳಗೆ ಹೋಗಿ ನೋಡಿದಾಗ ಕೌರ್ ಶವ ಕಂಡಿದೆ. ಕೂಡಲೇ ಮನೆಯಿಂದ ಹೊರ ಬಂದ ರಣ್‍ಬೀರ್ ನೆರೆಹೊರೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇನ್ನು ತಾಯಿ ಸಾವನ್ನಪ್ಪಿದ ಬಳಿಕ ಮನೆಯಲ್ಲಿದ ಅರ್ಮಾನ್ ಕೇವಲ ಬಿಸ್ಕಟ್ ತಿಂದು ಮೂರು ದಿನ ಕಳೆದಿದ್ದಾನೆ. ಪ್ರತಿದಿನ ಹೊರ ಬರುತ್ತಿದ್ದ ಅರ್ಮಾನ್ ಯಾರಿಗೂ ತನ್ನ ತಾಯಿ ಸಾವನ್ನಪ್ಪಿರುವುದನ್ನು ತಿಳಿಸಿರಲಿಲ್ಲ. ಕಾರಣ ತಾಯಿ ಸಾಯುವ ಮುನ್ನ ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಮಾತು ತೆಗೆದುಕೊಂಡಿದ್ದರಿಂದ ಅರ್ಮಾನ್ ಯಾರಿಗೂ ತಿಳಿಸಿರಲಿಲ್ಲ ಅಂತಾ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಗಳಿಂದ ಕೌರ್ ಮತ್ತು ಆಕೆಯ ಪತಿಯ ನಡುವಿನ ಸಂಬಂಧ ಸರಿಯಾಗಿರಲಿಲ್ಲ. ಶಿಮ್ಲಾದಲ್ಲಿ ಓದುತ್ತಿದ್ದ ಮಗನಿಗೆ ಈ ಬಾರಿ ಯಾವುದೇ ಶಾಲೆಗೆ ಪ್ರವೇಶ ಸಹ ಸಿಕ್ಕಿರಲಿಲ್ಲ. ಈ ಎಲ್ಲ ವಿಚಾರಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕೌರ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಅಂತಾ ರಣ್‍ಬೀರ್ ಕೌರ್ ಹೇಳ್ತಾರೆ.

Comments are closed.