ರಾಷ್ಟ್ರೀಯ

900 ವರ್ಷಗಳ ಸತತ ಬರಗಾಲದಿಂದ ಸಿಂಧೂ ಕಣಿವೆ ನಾಗರಿಕತೆ ನಾಶ

Pinterest LinkedIn Tumblr


ಖರಗ್‌ಪುರ: ಒಂಭೈನ್ನೂರು ವರ್ಷಗಳ ಸತತ ಬರಗಾಲದಿಂದಾಗಿ ಸಿಂಧೂ ಕಣಿವೆ ನಾಗರಿಕತೆ 4,500 ವರ್ಷಗಳ ಹಿಂದೆ ನಶಿಸಿ ಹೋಯಿತು ಎಂದು ಖರಗ್‌ಪುರ ಐಐಟಿ ವಿಜ್ಞಾನಿಗಳ ತಂಡದ ಸಂಶೋಧನೆ ತಿಳಿಸಿದೆ. ಅಧ್ಯಯನದ ವೇಳೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ಈ ಹಿಂದಿನ ನಂಬಿಕೆಯನ್ನು ಪುಷ್ಟಿಗೊಳಿಸಿವೆ.

ಈ ಅಧ್ಯಯನದ ವಿವರಗಳು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪತ್ರಿಕೆ ಕ್ವಾಟೆರ್ನರಿ ಇಂಟರ್‌ನ್ಯಾಷನಲ್‌ ಜರ್ನಲ್‌ನಲ್ಲಿ ಈ ತಿಂಗಳು ಪ್ರಕಟವಾಗಲಿವೆ.

ಭೂವಿಜ್ಞಾನ ಮತ್ತು ಭೂಭೌತ ವಿಜ್ಞಾನಗಳ ವಿಭಾಗದ ಸಂಶೋಧಕರು ಕಳೆದ 5,000 ವರ್ಷಗಳ ಮಾನ್ಸೂನ್‌ ಏರಿಳಿತಗಳ ಅಧ್ಯಯನ ನಡೆಸುತ್ತಿದ್ದು, ವಾಯವ್ಯ ಹಿಮಾಲಯದ ಪ್ರದೇಶಗಳಲ್ಲಿ ಸತತ 900 ವರ್ಷಗಳ ಕಾಲ ಭೀಕರ ಬರಗಾಲ ಉಂಟಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಇದರಿಂದಾಗಿ ನಾಗರಿಕತೆಯ ಬೆಳವಣಿಗೆಗೆ ಕಾರಣವಾಗಿದ್ದ ನದಿಗಳೆಲ್ಲ ಬತ್ತಿಹೋದವು. ಕ್ರಮೇಣ ಅಲ್ಲಿ ವಾಸಿಸುತ್ತಿದ್ದ ಜನರೆಲ್ಲ ಮಳೆ ಚೆನ್ನಾಗಿ ಬೀಳುತ್ತಿದ್ದ ಪೂರ್ವ ಮತ್ತು ದಕ್ಷಿಣದ ಕಡೆಗೆ ವಲಸೆ ಹೋದರು.

ಲೇಹ್‌-ಲಡಾಖ್‌ ಪ್ರದೇಶದ ಸೊ ಮೊರಿರಿ ಸರೋವರದ ಸುತ್ತಮುತ್ತ 5,000 ವರ್ಷಗಳ ಮಳೆ ಪ್ರವೃತ್ತಿಯನ್ನು ಐಐಟಿ ಖರಗ್‌ಪುರದ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದೆ.

‘ಈ ವಲಯದಲ್ಲಿ ಬೆಳೆದ ನಾಗರಿಕತೆಯ ನಾಶಕ್ಕೆ ಕ್ರಿಸ್ತಪೂರ್ವ 2,350 ವರ್ಷಗಳಿಂದ (4,500 ವರ್ಷಗಳ ಹಿಂದೆ) ಕ್ರಿಸ್ತಪೂರ್ವ 1,450 ವರ್ಷಗಳ ವರೆಗೆ ಮಳೆಯ ಕೊರತೆಯೇ ಪ್ರಮುಖ ಕಾರಣವಾಯಿತು. ಬರಗಾಲದ ಪರಿಸ್ಥಿತಿ ತಲೆದೋರಿ, ಅಲ್ಲಿನ ನಿವಾಸಿಗಳು ಹಸಿರು ಪ್ರದೇಶಗಳನ್ನು ಅರಸಿ ವಲಸೆ ಹೋಗುವಂತಾಯಿತು’ ಎಂದು ಸಂಶೋಧಕರ ತಂಡದ ಮುಖ್ಯಸ್ಥ ಅನಿಲ್ ಕುಮಾರ್ ಗುಪ್ತಾ ತಿಳಿಸಿದರು.

ಈ ರೀತಿ ನೆಲೆ ಕಳೆದುಕೊಂಡ ಜನರು ಕ್ರಮೇಣ ಗಂಗಾ-ಯಮುನಾ ಕಣಿವೆಯತ್ತ ಪೂರ್ವ ಮತ್ತು ಮಧ್ಯ ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಳ ಹಾಗೂ ದಕ್ಷಿಣದಲ್ಲಿ ವಿಂಧ್ಯಾಚಲ ಮತ್ತು ದಕ್ಷಿಣ ಗುಜರಾತ್‌ ಕಡೆ ವಲಸೆ ಹೋದರು ಎಂದು ಗುಪ್ತಾ ತಿಳಿಸಿದರು.

Comments are closed.