ರಾಷ್ಟ್ರೀಯ

10ನೇ ‘ಡಿಫೆನ್ಸ್‌ ಎಕ್ಸ್‌ಪೋಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ಚೆನ್ನೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ 10ನೇ ‘ಡಿಫೆನ್ಸ್‌ ಎಕ್ಸ್‌ಪೋ (2018)’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆ ಸಾಧಿಸುವುದು ಈ ‘ಡಿಫೆನ್ಸ್‌ ಎಕ್ಸ್‌ಪೋ’ದ ಪ್ರಮುಖ ಉದ್ದೇಶ ಎಂದರು.

ರಕ್ಷಣಾ ಉಪಕರಣಗಳ ರಫ್ತು, ವಿದೇಶಿ ನೇರ ಹೂಡಿಕೆ, ಸ್ಥಳೀಯವಾಗಿ ಉಪಕರಣಗಳ ಉತ್ಪಾದನೆಗೆ ರಕ್ಷಣಾ ಹಬ್‌ಗಳ ನಿರ್ಮಾಣಕ್ಕೆ ಈ ಡಿಫೆನ್ಸ್‌ ಎಕ್ಸ್‌ಪೋ ಉತ್ತೇಜನ ನೀಡಲಿದೆ ಎಂದು ತಿಳಿಸಿದರು. ತುರ್ತು ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವ ಹಾಗೂ ಯುದ್ಧಕ್ಕೆ ಬಳಕೆ ಮಾಡಬಹುದಾದ 110 ಫೈಟರ್‌ ಏರ್‌ಕ್ರಾಫ್ಟ್‌ಗಳನ್ನು ರಕ್ಷಣಾ ಇಲಾಖೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೋದಿ ತಿಳಿಸಿದರು.

10ನೇ ‘ಡಿಫೆನ್ಸ್‌ ಎಕ್ಸ್‌ಪೋ 2018’ದಲ್ಲಿ 40ಕ್ಕೂ ಹೆಚ್ಚು ದೇಶಗಳ ಅಧಿಕೃತ ನಿಯೋಗಗಳು, 150ಕ್ಕೂ ಹೆಚ್ಚು ವಿದೇಶಿ ಕಂಪನಿಗಳು ಹಾಗೂ 500 ಭಾರತೀಯ ಕಂಪನಿಗಳು ಭಾಗವಹಿಸಿವೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಉಪಸ್ಥಿತರಿದ್ದರು.

ಮೋದಿಗೆ ಕಪ್ಪು ಬಾವುಟ: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕೆಲ ಪ್ರತಿಭಟನಾಕಾರರು ಮೋದಿಯವರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು.

ಪ್ರಯಾಣಿಕರಂತೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರತಿಭಟನೆಕಾರರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Comments are closed.