ರಾಷ್ಟ್ರೀಯ

ಆಂಟಿಯ ಪ್ರೇಮಕ್ಕಾಗಿ ಬಾಲಕನೋರ್ವನನ್ನು ಕಿಡ್ನಾಪ್ ಮಾಡಿ ಬೇಡಿಕೆಯಿಟ್ಟ ಭಗ್ನ ಪ್ರೇಮಿ ! ಮುಂದೆ ಆದದ್ದೇ ಬೇರೆ…!!!

Pinterest LinkedIn Tumblr

ಹೈದರಾಬಾದ್: ಮಕ್ಕಳು, ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುವುದನ್ನು ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ 8 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ ಆತನ ಆಂಟಿಗಾಗಿ ಬೇಡಿಕೆಯಿಟ್ಟ ವಿಚಿತ್ರ ಪ್ರಕರಣವೊಂದು ಹೈದರಾಬಾದ್ ನಲ್ಲಿ ನಡೆದಿದೆ.

ಆರೋಪಿಯನ್ನು 23 ವರ್ಷದ ವಂಶಿ ಕೃಷ್ಣ ಎಂದು ಗುರುತಿಸಲಾಗಿದ್ದು, ಈತ ಮಹಬೂಬ್ ನಗರ ಜಿಲ್ಲೆಯವನಾಗಿದ್ದಾನೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರೋ ಈತ ಕಿಡ್ನಾಪ್ ಮಾಡಿದ 24 ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸರು ಬಾಲಕನನ್ನು ರಕ್ಷಿಸಿದ್ದಾರೆ.

ಕಿಡ್ನಾಪ್ ಮಾಡಿದ್ದು ಯಾಕೆ?: ವಂಶಿ ಕೃಷ್ಣ ಬಾಲಕನಿಗೆ ಸಂಬಂಧದಲ್ಲಿ ಆಂಟಿಯಾಗಬೇಕಿದ್ದವರ ಜೊತೆ ಪ್ರೇಮ ಸಂಬಂಧವಿಟ್ಟುಕೊಂಡಿದ್ದನು. ಈಕೆ ಹೈದರಾಬಾದ್ ನ ಶಿವರಾಮ್‍ಪಳ್ಳಿಯಲ್ಲಿ ನೆಲೆಸಿದ್ದರು. ವಂಶಿ ಹಾಗೂ ಮಹಿಳೆಯ ಪ್ರೇಮ ಸಂಬಂಧದ ವಿಚಾರ ಆಕೆಯ ಮನೆಯವರಿಗೆ ತಿಳಿದು ದೊಡ್ಡ ರದ್ದಾಂತವೇ ನಡೆದಿತ್ತು. ಶಿವರಾಮ್ ಪಳ್ಳಿಗೆ ಬಂದಿದ್ದ ವೇಳೆ ಮಹಿಳೆಯ ಕುಟುಂಬಸ್ಥರು ವಂಶಿಗೆ ಚೆನ್ನಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಮುಂದೆ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳಬಾರದೆಂದು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದರಿಂದ ವಂಶಿ ಸಿಟ್ಟಾಗಿದ್ದು, ಮಹಿಳೆಯ ಕುಟುಂಬಸ್ಥರ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚುಹಾಕುತ್ತಿದ್ದನು.

ಬಾಲಕನ ಕಿಡ್ನಾಪ್: ತನ್ನ ಪ್ರಿಯತಮೆಯ ಮನೆಯವ ವಿರುದ್ಧ ಸಿಡಿದೆದ್ದ ವಂಶಿ ಅದೇ ಕುಟುಂಬಕ್ಕೆ ಸೇರಿದ ಬಾಲಕನನ್ನು ಅಪಹರಿಸುವ ಯೋಜನೆ ಹಾಕಿದ್ದಾನೆ.

8 ವರ್ಷದ ಬಾಲಕ ಚಂದ್ರು ನಾಯ್ಕ್ ಕೊಥಕೋಟದಲ್ಲಿರೋ ಭಾರತೀಯ ವಿದ್ಯಾಮಂದಿರ್ ವಸತಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಈ ವಿಚಾರ ವಂಶಿಗೆ ತಿಳಿದಿತ್ತು. ಹೀಗಾಗಿ ಆತನನ್ನೇ ಕಿಡ್ನಾಪ್ ಮಾಡಿ ಪ್ರೇಯಸಿಯನ್ನು ತನ್ನವಳನ್ನಾಗಿ ಮಾಡಿಕೊಳ್ಳಬಹುದೆಂದು ಪ್ಲಾನ್ ಹಾಕಿದ್ದ. ಹೀಗಾಗಿ ಚಂದ್ರು ವ್ಯಾಸಂಗ ಮಾಡುವ ವಸತಿ ಶಾಲೆಯತ್ತ ತನ್ನ ಚಿತ್ತ ಹರಿಸಿದ್ದಾನೆ. ಶಾಲೆಗೆ ಬಂದ ವಂಶಿ, ಬಾಲಕ ಚಂದ್ರುವಿನ ತಾಯಿಗೆ ಹೈದರಾಬಾದ್ ನಲ್ಲಿ ಅಪಘಾತವಾಗಿದೆ. ಹೀಗಾಗಿ ಆತನನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ತನ್ನ ಜೊತೆ ಕರೆದುಕೊಂಡು ಹೋಗಲು ಅನುವು ಮಾಡಿಕೊಡಬೇಕೆಂದು ಅಲ್ಲಿನ ಸಿಬ್ಬಂದಿಯಲ್ಲಿ ವಿನಂತಿಸಿಕೊಂಡಿದ್ದಾನೆ.

ಬಾಲಕನು ಕೂಡ ವಂಶಿ ನಮ್ಮ ನೆರೆಮನೆಯವನೆಂದು ಶಾಲಾ ಸಿಬ್ಬಂದಿಯಲ್ಲಿ ಹೇಳಿದ್ದಾನೆ. ಹೀಗಾಗಿ ಅವರು ವಂಶಿ ಜೊತೆ ಚಂದ್ರು ಹಾಗೂ ಆತನ ಇಬ್ಬರು ಸಹೋದರರನ್ನು ಕಳುಹಿಸಿಕೊಡಲು ಒಪ್ಪಿದ್ದಾರೆ. ಕೊಥಕೋಟ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ವಂಶಿ ಸಹೋದರರನ್ನು ನಿಲ್ದಾಣದಲ್ಲೇ ನಿಲ್ಲುವಂತೆ ಹೇಳಿ, ಚಂದ್ರು ನಾಯ್ಕ್ ನನ್ನು ಕರೆದುಕೊಂಡು ಹೋಗಿದ್ದಾನೆ. ಇತ್ತ ಕೆಲ ಹೊತ್ತು ಕಳೆದ್ರೂ ಇವರಿಬ್ಬರೂ ಹಿಂದಿರುಗಿ ಬಾರದೇ ಇದ್ದುದರಿಂದ ಚಂದ್ರು ಸಹೋದರರಿಬ್ಬರೂ ಶಾಲೆಗೆ ವಾಪಸ್ ತೆರಳಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಮನೆಯವರು ಶಾಲೆಗೆ ಕರೆ ಮಾಡಿ, ವಂಶಿ ಯಾಕೆ ಅವರನ್ನು ಕರೆದಿದ್ದು, ಆತ ಇದೀಗ ಬಾಲಕ ಚಂದ್ರುವನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಇತ್ತ ವಂಶಿ ಬಾಲಕನ ಮನೆಗೆ ಪದೇ ಪದೇ ಕರೆ ಮಾಡಿ ಮಹಿಳೆ ನನ್ನನ್ನು ಪ್ರೀತಿಸಿದರೆ ಆತನನ್ನು ಬಿಟ್ಟು ಬಿಡುವುದಾಗಿ ಬೇಡಿಕೆಯಿಟ್ಟಿದ್ದಾನೆ. ಕೂಡಲೇ ಅಂದ್ರೆ ಏ.8ರಂದು ಬಾಲಕ ಚಂದ್ರುವಿನ ಅಜ್ಜಿ ರತ್ಲಾವತ್ ಜೂಲಿ ಕೊಥಕೋಟ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವನಪರ್ಥಿ ಜಿಲ್ಲೆಯ ಎಸ್‍ಪಿ ರೀಮಾ ರಾಜೇಶ್ವರಿ ವಿಶೇಷ ತಂಡಗಳನ್ನು ರಚಿಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಕನ ರಕ್ಷಣೆ: ಆರೋಪಿ ವಂಶಿ ಬಾಲಕನನ್ನು ಅಪಹರಿಸಿ ಮಹಾರಾಷ್ಟ್ರದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮೊಬೈಲ್ ಟವರ್ ಪತ್ತೆ ಹಚ್ಚಿ ಕೂಡಲೇ ತೆಲಂಗಾಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಹೀಗಾಗಿ ಎಚ್ಚೆತ್ತ ಪೊಲೀಸರು ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಿದ್ದಾರೆ. ಇತ್ತ ಕೊಥಕೋಟಾದ ವಿಶೇಷ ತಂಡ ಪುಣೆಗೆ ತೆರಳಿತ್ತು. ಪುಣೆ ರೈಲು ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಬಾಲಕನನ್ನು ಕಂಡ ಪೊಲೀಸರು ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರನ್ನು ಕಂಡ ಆರೋಪಿ ವಂಶಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ ವಿಶೇಷ ತಂಡ ಲಾರೋಪಿಯನ್ನು ಬಂಧಿಸಿ, ಇಬ್ಬರನ್ನೂ ಊರಿಗೆ ವಾಪಸ್ ಕರೆದುಕೊಂಡು ಬಂದಿದ್ದಾರೆ.

Comments are closed.