ರಾಷ್ಟ್ರೀಯ

ದೇಶದ ಮೊದಲ ಅಧಿಕ ಶಕ್ತಿಯ ವಿದ್ಯುತ್‌ ಎಂಜಿನ್‌ಗೆ ಇಂದು ಚಾಲನೆ

Pinterest LinkedIn Tumblr


ಹೊಸದಿಲ್ಲಿ: ದೇಶದ ಮೊದಲ ಅಧಿಕ ಶಕ್ತಿಯ ವಿದ್ಯುತ್‌ ಚಾಲಿತ ರೈಲು ಎಂಜಿನ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ದೇಶಕ್ಕೆ ಸಮರ್ಪಿಸಲಿದ್ದಾರೆ. ಬಿಹಾರದ ಮಾಧೇಪುರ ಕಾರ್ಖಾನೆಯಲ್ಲಿ ಈ ಎಂಜಿನ್‌ ಅನ್ನು ಸಿದ್ಧಪಡಿಸಲಾಗಿದೆ.

ಮುಖ್ಯಾಂಶಗಳು:

ಫ್ರೆಂಚ್‌ ದೈತ್ಯ ಅಲ್‌ಸ್ಟೋಮ್ ಜತೆಗೆ ಭಾರತೀಯ ರೈಲ್ವೆಯ ಮೊದಲ ಜಂಟಿ ಸಹಭಾಗಿತ್ವದ ಯೋಜನೆ ಇದಾಗಿದೆ. ರೈಲ್ವೆ ವಲಯದ ಮೊದಲ ಬೃಹತ್‌ ವಿದೇಶಿ ನೇರ ಬಂಡವಾಳ ಹೂಡಿಕೆ ಒಪ್ಪಂದಕ್ಕೆ 2015ರಲ್ಲಿ ಸಹಿ ಹಾಕಲಾಗಿತ್ತು.

ಸುಮಾರು 1,300 ಕೋಟಿ ರೂ.ಗಳ ಬಂಡವಾಳ ಹೂಡಿಕೆಯೊಂದಿಗೆ ಜಂಟಿ ಸಹಭಾಗಿತ್ವದ ಕಂಪನಿ ಸ್ಥಾಪಿಸಲಾಗಿದ್ದು, ರೈಲ್ವೆ ಸಚಿವಾಲಯ 100 ಕೋಟಿ ರೂ.ಗಳ (ಶೇ 26ರ) ಸಹಭಾಗಿತ್ವ ಹೊಂದಿರುತ್ತದೆ.

12,000 ಅಶ್ವಶಕ್ತಿ (ಎಚ್‌ಪಿ) ಮತ್ತು ಅದಕ್ಕೂ ಹೆಚ್ಚಿನ ಶಕ್ತಿಯ ವಿದ್ಯುತ್‌ ಎಂಜಿನ್‌ಗಳನ್ನು ಹೊಂದಿರುವ ಪ್ರಮುಖ ರಾಷ್ಟ್ರಗಳಾದ ರಷ್ಯಾ, ಚೀನಾ, ಜರ್ಮನಿ ಮತ್ತು ಸ್ವೀಡನ್‌ಗಳ ಸಾಲಿಗೆ ಭಾರತವೂ ಸೇರಲಿದೆ. ಇದುವರೆಗೆ ಭಾರತೀಯ ರೈಲ್ವೆಯಲ್ಲಿ ಇದ್ದ ಅತ್ಯಧಿಕ ಶಕ್ತಿಯ ವಿದ್ಯುತ್‌ ಎಂಜಿನ್ ಎಂದರೆ 6,000 ಎಚ್‌.ಪಿ ಸಾಮರ್ಥ್ಯದ ಎಂಜಿನ್.

ಎಂಜಿನ್‌ ಕಾರ್ಖಾನೆ

ಭಾರತೀಯ ರೈಲ್ವೆ ಮುಂದಿನ 11 ವರ್ಷಗಳಲ್ಲಿ 800ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ರೈಲು ಎಂಜಿನ್‌ಗಳನ್ನು ಉತ್ಪಾದಿಸಲು ಯೋಜಿಸಿದೆ. ಬಹುತೇಕ ಎಲ್ಲ ರೈಲು ಮಾರ್ಗಗಳಲ್ಲೂ ವಿದ್ಯುತ್‌ ಚಾಲಿತ ರೈಲುಗಳನ್ನು ಓಡಿಸಲು ಇಷ್ಟು ಸಂಖ್ಯೆಯ ಅಧಿಕ ಶಕ್ತಿಯ ಲೋಕೊಮೋಟಿವ್‌ಗಳ ಅಗತ್ಯವಿದೆ.

ಗಂಟೆಗೆ 110 ಕಿ.ಮೀ ವೇಗದ ಈ ಎಂಜಿನ್‌ಗಳು, ಸರಕು ಸಾಗಣೆ ರೈಲುಗಳ ವೇಗ ಮತ್ತು ಸಾಮರ್ಥ್ಯ ಹೆಚ್ಚಿಸಲು ನೆರವಾಗಲಿವೆ.

2019ರೊಳಗೆ ಈ ಫ್ಯಾಕ್ಟರಿಯಲ್ಲಿ ಐದು ಲೋಕೊಮೋಟಿವ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಉಳಿದ 795 ಎಂಜಿನ್‌ಗಳನ್ನು ‘ಮೇಕ್‌ ಇನ್‌ ಇಂಡಿಯಾ’ ಉಪಕ್ರಮದಡಿ ಸಿದ್ಧಪಡಿಸಲಾಗುತ್ತದೆ. ಮೊದಲ ಲೋಕೋಮೋಟಿವ್‌ ಇಂದು (ಏಪ್ರಿಲ್ 10ರಂದು) ಚಾಲನೆಗೊಳ್ಳಲಿದೆ. ಉಳಿದ ನಾಲ್ಕು ಎಂಜಿನ್‌ಗಳು ಇದೇ ಆರ್ಥಿಕ ವರ್ಷದಲ್ಲಿ ಹಳಿಗೆ ಬರಲಿವೆ.
ಕಾರ್ಖಾನೆ ಒಳಾಂಗಣ

ಮುಂದಿನ ವಿತ್ತ ವರ್ಷದಲ್ಲಿ ಮಾಧೇಪುರ ಕಾರ್ಖಾನೆಯಲ್ಲಿ ಸುಮಾರು 35 ಎಂಜಿನ್‌ಗಳನ್ನು ಸಿದ್ಧಪಡಿಸಲಿದ್ದು, 60 ಎಂಜಿನ್‌ಗಳ ಜೋಡಣೆ ಕಾರ್ಯವನ್ನು 2020-21ರಲ್ಲಿ ಪೂರ್ಣಗೊಳಿಸಲಾಗುವುದು.

35ಕ್ಕೂ ಹೆಚ್ಚು ಎಂಜಿನಿಯರ್‌ಗಳ ತಂಡವು ಈ ವಿದ್ಯುತ್‌ ಎಂಜಿನ್‌ ಜೋಡಣೆಗೆ ಹಗಲೂರಾತ್ರಿ ದುಡಿಯುತ್ತಿದ್ದು, ಇದಕ್ಕೆ ಒಟ್ಟು 20,000 ಕೋಟಿಗೂ ಹೆಚ್ಚಿನ ವೆಚ್ಚ ಅಂದಾಜಿಸಲಾಗಿದೆ.

ಈ ಎಂಜಿನ್‌ಗಳನ್ನು ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ಸಾಗಣೆಗೆ ಬಳಸಲಾಗುವುದು. 12,000 ಎಚ್‌ಪಿ ಸಾಮರ್ಥ್ಯದ ಈ ಎಂಜಿನ್‌ಗಳು ಭಾರತೀಯ ಸರಕು ಸಾಗಣೆ ಮಾನದಂಡಗಳಿಗೆ ಅನುಗುಣವಾಗಿ ಸಿದ್ಧಗೊಳ್ಳುತ್ತಿವೆ.
ವಿದ್ಯುತ್‌ ಎಂಜಿನ್‌- ಸಮೀಪ ನೋಟ

ಈ ಕಾರ್ಖಾನೆಗೆ 2007ರಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್‌ ಯಾದವ್‌ ಭೂಮಿಪೂಜೆ ನೆರವೇರಿಸಿದ್ದರು. ರಾಜಧಾನಿ ಪಟನಾದಿಂಧ 284 ಕಿ.ಮೀ ದೂರದ ಮಾಧೇಪುರದಲ್ಲಿ 250 ಎಕರೆಗೂ ಹೆಚ್ಚು ವಿಸ್ತಾರದಲ್ಲಿ ಈ ಕಾರ್ಖಾನೆ ವ್ಯಾಪಿಸಿದೆ.

Comments are closed.