ರಾಷ್ಟ್ರೀಯ

ಬಿಹಾರದಲ್ಲಿ ಗಸ್ತುವಾಹನದಲ್ಲಿ ಮದ್ಯ ಸೇವಿಸಿ ಗರ್ಭಿಣಿ ಸಾವಿಗೆ ಕಾರಣವಾದ ಐವರು ಪೋಲೀಸರ ಅಮಾನತು !

Pinterest LinkedIn Tumblr

ಪಾಟ್ನಾ: ಗಸ್ತು ವಾಹನದಲ್ಲಿ ಮದ್ಯ, ಚಿಕನ್ ಸೇವಿಸಿದ್ದಲ್ಲದೆ ಗರ್ಭಿಣಿ ಮಹಿಳೆಯೊಬ್ಬಳ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳನ್ನು ಶನಿವಾರ ಅಮಾನತುಗೊಳಿಸಲಾಗಿದೆ.

ಓರ್ವ ಸಹಾಯಕ ಪೋಲೀಸ್ ಇನ್ಸ್ ಪೆಕ್ಟರ್ ಹಾಗೂ ನಾಲ್ವರು ಪೇದೆಗಳು ಮತ್ತು ಪೊಲೀಸ್ ದಳದಲ್ಲಿದ್ದ ಪೊಲೀಸ್ ಚಾಲಕನನ್ನು ಪ್ರಾಥಮಿಕ ತನಿಖೆಯ ನಂತರ ಅಮಾನತುಗೊಳಿಸಲಾಗಿದೆ. ಅವರು ವಾಹನ ಚಲಾಯಿಸುವ ವೇಳೆ ಮದ್ಯಪಾನ ಮಾಡಿದ್ದರೀನ್ನುವುದು ಇನ್ನೂ ಖಚಿತವಾಗಬೇಕಿದೆ. ಇದಕ್ಕಾಗಿ ಐದು ಪೋಲೀಸ್ ಅಧಿಕಾರಿಗಳ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಗೋಪಾಲ್ಗಂಜ್ ಎಸ್.ಪಿ. ರವಿರಂಜನ್ ಕುಮಾರ್ ಹೇಳಿದ್ದಾರೆ.

ಮಹಮದ್ ಪುರ ಪೋಲೀಸ್ ಠಾಣೆಗೆ ಸೇರಿದ್ದ ಟಾಟಾ ಸುಮೋ ಗಸ್ತು ವಾಹನದ ಚಕ್ರದಡಿ ಸಿಲುಕಿ ಕಿರಣ್ ದೇವಿ,(20) ಎನ್ನುವ ಗರ್ಭಿಣಿ ಮಹಿಳೆ ಶುಕ್ರವಾರ ಸಾವನ್ನಪ್ಪಿದ್ದರು.

ಈ ವೇಳೆ ಸ್ಥಳೀಯ ಜನರು ವಾಹನದ ಚಿತ್ರಗಳನ್ನು ತೆಗೆದಿದ್ದು ಅದರಲ್ಲಿ ವಾಹನದ ಹಿಂಭಾಗದ ಸೀಟಿನಲ್ಲಿ ವಿದೇಶಿ ಮದ್ಯ ಮತ್ತು ಚಿಕನ್ ಇರುಉವುದು ಪತ್ತೆಯಾಗಿದೆ. ವಾಹನದಲ್ಲಿದ್ದ ಐವರು ಪೋಲೀಸರು ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಾಗಿ ಎರಡು ವರ್ಷ ಪೂರ್ಣಗೊಂಡ ಎರಡು ದಿನಗಳ ತರುವಾಯ ಈ ಘಟನೆ ನಡೆದಿದ್ದು ನಿತೀಶ್ ಕುಮಾರ್ ಸರ್ಕಾರವನ್ನು ಟೀಕಿಸಲು ಪ್ರತಿಪಕ್ಷಗಳಿಗೆ ಅಸ್ತ್ರವೊಂದು ದೊರೆತಂತಾಗಿದೆ.

“ಪೊಲೀಸ್ ಇಲಾಖೆ ನಿತೀಶ್ ಕುಮಾರ್ ಅವರ ನೇರ ನಿಯಂತ್ರಣದಲ್ಲಿದೆ. ಮದ್ಯ ನಿಷೇಧವನ್ನು ಅನುಷ್ಠಾನಗೊಳಿಸುತ್ತಿದ್ದ ಪೋಲಿಸರ ವಾಹನದಲ್ಲೇ ಮದ್ಯ, ಚಿಕನ್ ಪತ್ತೆಯಾಗಿದೆ. ಮುಖ್ಯಮಂತ್ರಿಗಳು ಒಂದು ದಿನದ ಹಿಂದಷ್ಟೇ ಮದ್ಯ ನಿಷೇಧದ ಜಾರಿಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ್ದರೆಂದು ವಿರೋಧ ಪಕ್ಷದ ನಾಯಕ ತೇಜಶ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ಹಾಗೂ ಜಾರ್ಖಂಡ್ ನಿಂದ ಬಿಹಾರಕ್ಕೆ ಮದ್ಯವನ್ನು ಏಕೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ತಿಳಿಸಬೇಕೆಂದು ಅವರು ಹೇಳಿದ್ದಾರೆ.

2016ರಿಂದ ಬಿಹಾರದಲ್ಲಿ ಪಾನ ನಿಷೇಧ ಜಾರಿಯಲ್ಲಿದ್ದು ಪಾನ ನಿಷೇಧ ಯೋಜನೆ ಜಾರಿಯ ದ್ವೈವಾರ್ಷಿಕ ಸಮಾರಂಭದಲ್ಲಿ ನಿಷೇಧದಿಂದ ಪಡೆದ ಸಾಮಾಜಿಕ ಆರ್ಥಿಕ ಲಾಭಗಳನ್ನು ನಿತೀಶ್ ಕುಮಾರ್ ಶ್ಲಾಘಿಸಿದ್ದರು.

Comments are closed.