ರಾಷ್ಟ್ರೀಯ

ಮೇಕ್‌ ಇನ್‌ ಇಂಡಿಯಾ ಅಡಿ ಯುದ್ಧ ವಿಮಾನ ಉತ್ಪಾದನೆಗೆ ಟೆಂಡರ್‌ ವಿತರಿಸಲು ವಾಯುಪಡೆ ಸನ್ನದ್ಧ

Pinterest LinkedIn Tumblr


ದೆಹಲಿ: ವಿದೇಶೀ ಸಂಸ್ಥೆಯ ಸಹಯೋಗದಲ್ಲಿ 114 ಸಿಂಗಲ್/ಡಬಲ್‌ ಎಂಜಿನ್‌ ಯುದ್ಧ ವಿಮಾನಗಳನ್ನು “ಮೇಕ್‌ ಇನ್‌ ಇಂಡಿಯಾ” ಅಡಿ ಉತ್ಪಾದಿಸಲು ಪ್ರಕ್ರಿಯೆ ಆರಂಭಿಸಲು ವಾಯು ಪಡೆ ಮುಂದಾಗಿದೆ.

ಈ ನಿಟ್ಟಿನಲ್ಲಿ ಮಾಹಿತಿ ಕೋರಿ ವಿನಂತಿಯನ್ನು ಹೊರಡಿಸಲು ವಾಯು ಪಡೆ ಸನ್ನದ್ಧವಾಗಿದೆ. ಭಾರತೀಯ ಸಂಸ್ಥೆಯೊಂದರ ಜತೆ ಪಾಲುದಾರಿಕೆಯಲ್ಲಿ ದೇಶದಲ್ಲೇ ವಿಮಾನ ಉತ್ಪಾದನೆ ಮಾಡಲು ಸಿದ್ಧವಿರುವ ವಿದೇಶೀ ಕಂಪನಿಗಳಿಗಾಗಿ ವಾಯು ಪಡೆ ಹುಡುಕಾಟ ಆರಂಭಿಸಿದೆ.

ತ್ವರಿತವಾಗಿ ಕಡಿಮೆಯಾಗುತ್ತಿರುವ ಭಾರತೀಯ ವಾಯು ಪಡೆಯ ಸ್ಕ್ವಾಡರ್ನ್‌‌ಗಳ ಸಂಖ್ಯೆಯನ್ನು

ಮತ್ತೆ ಮೇಲೆತ್ತುವ ನಿಟ್ಟಿನಲ್ಲಿ ತೇಜಸ್‌ನೊಂದಿಗೆ ಇನ್ನಷ್ಟು ಯುದ್ಧ ವಿಮಾನಗಳ ಕ್ರೋಢೀಕರಣಕ್ಕೆ ವಾಯು ಪಡೆ ಉತ್ಸುಕತೆ ತೋರಿದೆ.

ವಾಯು ಪಡೆಯಲ್ಲಿ ಸದ್ಯ ಕೇವಲ 31 ಸ್ಕ್ವಾಡರ್ನ್‌ಗಳಿದ್ದು, ಚೀನಾ ಹಾಗು ಪಾಕಿಸ್ತಾನಗಳ ಸಂಭವನೀಯ ಜಂಟಿ ದಾಳಿಯನ್ನು ಎದುರಿಸಲು ಸಮರ್ಥವಾಗರಬೇಕಾದಲ್ಲಿ ಕನಿಷ್ಠ 42 ಸ್ಕ್ವಾಡರ್ನ್‌‌ಗಳ ಅಗತ್ಯವಿದೆ. ಪ್ರತಿ ಸ್ಕ್ವಾಡರ್ನ್‌‌ನಲ್ಲೂ 18-20 ಯುದ್ಧ ವಿಮಾನಗಳಿರಲಿವೆ.

“ಕೇವಲ ಸಿಂಗಲ್ ಇಂಜಿನ್‌ ಫೈಟರ್‌ಗಳ ಕ್ರೋಢೀಕರಣಕ್ಕೆ ಈ ಹಿಂದೆ ಯೋಚಿಸಲಾಗಿತ್ತು. ಆದರೆ ಇದರಿಂದಾಗಿ ಪೈಪೋಟಿ ಕಡಿಮೆಯಾಗಿ ಕೇವಲ ಎರಡು ಕಂಪನಿಗಳಷ್ಟೇ ಮುಂದೆ ಬಂದಿದ್ದವು. ಹೀಗಾಗಿ, ಪೈಪೋಟಿ ಏರಿಸುವ ಮೂಲಕ ಇನ್ನಷ್ಟು ಹೆಚ್ಚಿನ ಆಯ್ಕೆಗಳನ್ನು ಮುಂದೆ ಇಟ್ಟುಕೊಂಡು ನಂತರದ ದಿನಗಳಲ್ಲಿ ಇಲ್ಲ ಸಲ್ಲದ ಆಪಾದನೆಗಳನ್ನು ಕೇಳುವುದನ್ನು ತಪ್ಪಿಸಲು ಇಚ್ಛಿಸುತ್ತೇವೆ” ಎಂದು ಮೂಲಗಳಿಂದ ತಿಳಿದುಬಂದಿದೆ.

ರಕ್ಷಣಾ ಸಚಿವಾಲಯದ ವ್ಯೂಹಾತ್ಮಕ ಪಾಲುದಾರಿಕೆ ಅಡಿಯಲ್ಲಿ ಭಾರತೀಯ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡು ಭಾರತದಲ್ಲೇ ಯುದ್ಧ ವಿಮಾನ ಉತ್ಪಾದನೆ ಮಾಡಲು ಉತ್ಸುಕವಾಗಿರುವ ಕಂಪನಿಗಳಿಗೆ ವಾಯು ಪಡೆ ನೋಡುತ್ತಿದೆ.

Comments are closed.