ರಾಷ್ಟ್ರೀಯ

ರೈತರಿಗೆ ಕಡ್ಡಾಯ ಬೆಳೆ ವಿಮೆ ವಿರುದ್ಧ ಭಾರತೀಯ ಕಿಸಾನ್ ಸಂಘ ಪಿಐಎಲ್

Pinterest LinkedIn Tumblr


ಅಹಮದಾಬಾದ್: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ (ಪಿಎಂಎಫ್‌ಬಿವೈ) ರೈತರಿಗೆ ನೀಡುತ್ತಿರುವ ಕಡ್ಡಾಯ ಬೆಳೆ ವಿಮೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಗುಜರಾತ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ರೈತರಿಗೆ ಬೆಳೆ ವಿಮೆ ಕಡ್ಡಾಯಗೊಳಿಸುವಂತಿಲ್ಲ. ಇದಕ್ಕಾಗಿ ರೈತರಿಗೆ ಯಾವುದೇ ರಸೀದಿ, ಸ್ವೀಕೃತಿಪತ್ರ ನೀಡುತ್ತಿಲ್ಲ ಎಂದು ಸಂಘಟನೆ ಆರೋಪಿಸಿದೆ.

ರೈತರು ವಿಮೆಯನ್ನು ಕ್ಲೈಮ್ ಮಾಡಿದಾಗ ವಿಮಾ ಕಂಪೆನಿಗಳು ನುಣುಚಿಕೊಳ್ಳುತ್ತಿವೆ ಎಂದು ಬಿಕೆಎಸ್ ದೂರಿದೆ. ಮುಖ್ಯವಾಗಿ ವಿಮಾ ಕಂಪೆನಿಗಳು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅಡಿ ಬರಬೇಕು ಎಂದಿದೆ.

ಕೆಲವು ಪ್ರದೇಶಗಳು ಹಾಗೂ ವಿಶೇಷ ಬೆಳೆಗಳು ಮಾತ್ರ ಬೆಳೆ ವಿಮೆಯಡಿ ಬರುತ್ತವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಸೂಕ್ತ ಅಲ್ಲ. ಬೆಳೆ ವಿಮೆ ಬಗೆಗಿನ ಮಾಹಿತಿ ಸ್ಥಳೀಯ ಭಾಷೆಗಳಲ್ಲೂ ಲಭ್ಯವಾಗುವಂತಿರಬೇಕು. ಕನಿಷ್ಠ ಹಿಂದಿಯಲ್ಲಾದರೂ ಸಿಗಬೇಕು ಎಂದು ಆಗ್ರಹಿಸಿದೆ ಬಿಕೆಎಸ್.

ವಿಮೆ ಕಂತನ್ನು ನೇರವಾಗಿ ರೈತರ ಖಾತೆಗಳಿಂದ ಕಡಿತಗೊಳಿಸುವಂತಿರಬೇಕು. ಒಂದು ವೇಳೆ ವಿಮೆ ಕಡ್ಡಾಯಗೊಳಿಸಿದರೆ ಪಾಲಿಸಿಯನ್ನು ರೈತರಿಗೆ ನೀಡಬೇಕು. ಆಗ ಅವರಿಗೆ ವಿಮೆ ಕವರೇಜ್ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಕೆಲವು ಪ್ರದೇಶಗಳಿಗೆ ಮಾತ್ರ ಬೆಳೆ ವಿಮೆ ಸೀಮಿತಗೊಳಿಸಿರುವ ಕಾರಣ ಬೇರೆ ಬೆಳೆಗಳಿಗೆ ವಿಮೆ ಸುರಕ್ಷತೆ ಸಿಗುತ್ತಿಲ್ಲ.

ಪ್ರಸ್ತುತ ಬೆಳೆ ವಿಮೆ ಯೊಜನೆಯಿಂದ ನೆಲಗಡಲೆ ಮತ್ತು ಹತ್ತಿ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಹಲವಾರು ಬಾರಿ ತಿಳಿಸಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗುಜರಾತ್ ಹೈಕೋರ್ಟ್‌ಗೆ ಸಲ್ಲಿಸಿರುವ ಪಿಐಎಲ್‌ನಲಿ ತಿಳಿಸಿದೆ. ಈ ಬಗ್ಗೆ ರಾಜ್ಯ ಸರಕಾರ ಮೂರು ವಾರಗಳಲ್ಲಿ ಸಂಪೂರ್ಣ ವಿವರಣೆ ನೀಡುವಂತೆ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆರ್ ಸುಭಾಷ್ ರೆಡ್ಡಿ ಆದೇಶಿಸಿದ್ದಾರೆ.

Comments are closed.