ರಾಷ್ಟ್ರೀಯ

ಭದ್ರತಾ ಸಮಿತಿ ಪಟ್ಟಿಯಲ್ಲಿ ಪಾಕಿಸ್ತಾನದ 139 ಭಯೋತ್ಪಾದಕರು

Pinterest LinkedIn Tumblr


ದೆಹಲಿ: ಜಾಗತಿಕ ಭಯೋತ್ಪಾಕರ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿರುವ ವಿಶ್ವ ಸಂಸ್ಥೆಯ ಭದ್ರತಾ ಸಮಿತಿ, ಇದರಲ್ಲಿ ಪಾಕಿಸ್ತಾನದ 139 ಭಯೋತ್ಪಾದಕರನ್ನು ಹೆಸರಿಸಿದ್ದು ಲಷ್ಕರೆ ತೊಯ್ಬಾ ಹಾಗು ಜೈಶೆ ಮೊಹಮ್ಮದ್ ಗೆ ಸೇರಿದ ಅನೇಕರಿದ್ದಾರೆ ಎಂದು ತಿಳಿದುಬಂದಿದೆ.

ಈ ಎಲ್ಲಾ ಪಾತಕಿಗಳು ಪಾಕಿಸ್ತಾನ ಮೂಲದವರು, ಇಲ್ಲವೇ ಪಾಕ್‌ನಲ್ಲಿ ಆಶ್ರಯ ಪಡೆದು ಕಾರ್ಯಚರಣೆ ಮಾಡುತ್ತಿರುವವರು ಅಥವಾ ಪಾಕ್‌ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವವರಾಗಿದ್ದಾರೆ.

ಪಟ್ಟಿಯಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ ಹಾಗು 26/11 ಮುಂಬಯಿ ದಾಳಿ ಮಾಸ್ಟರ್‌ ಮೈಂಡ್‌ ಹಫೀಝ್‌ ಸಯೀದ್‌ ಕೂಡ ಇದ್ದಾರೆ. ಪಾಕಿಸ್ತಾನದ ಅನೇಕ ಪಾಸ್‌ಪೋರ್ಟ್‌ ಇಟ್ಟಿರುವ ದಾವೂದ್‌, ಕರಾಚಿಯ ನೂರಾಬಾದ್ ಪ್ರದೇಶದ ವಿಲಾಸಿ ಬಂಗಲೆಯಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಲಾಗಿದೆ.

ಲಷ್ಕರೆ ತೊಯ್ಬಾದ ಸಯೀದ್‌ ಜತೆಗೆ ಪಟ್ಟಿಯಲ್ಲಿ ಇಂಟರ್‌ಪೋಲ್‌ಗೆ ಬೇಕಾಗಿರುವ ಹಾಜಿ ಮೊಹಮ್ಮದ್‌ ಯಾಹ್ಯಾ ಮುಜಾಹಿದ್‌ ಹಾಗು ಅಬ್ದುಲ್‌ ಸಲಾಂ ಮತ್ತು ಝಾಫರ್‌ ಇಕ್ಬಾಲ್‌ ಎಂಬ ಭಯೋತ್ಪಾದಕರೂ ಪಟ್ಟಿಯಲ್ಲಿದ್ದಾರೆ.

ಲಷ್ಕರೆ ಮಾತ್ರವಲ್ಲದೇ ಅದರ ಅನೇಕ ಅಂಗಗಳನ್ನೂ ಭದ್ರತಾ ಸಮಿತಿ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿದೆ. ಸಯೀದ್‌ನ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್‌ಅನ್ನು ಅಮೆರಿಕ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿ ಸೇರಿಸಿದೆ.

ಅಮೆರಿಕದ ಭಯೋತ್ಪಾದಕ ಪಟ್ಟಿಯಲ್ಲಿ, ಅಲ್ ಕೈದಾದ ಆಯ್‌ಮನ್‌ ಅಲ್‌ ಝವಾಹಿರಿ ಮೊದಲ ಸ್ಥಾನದಲ್ಲಿದ್ದಾನೆ. ಝವಾಹಿರಿ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಇನ್ನೂ ಅಡಗಿದ್ದಾನೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.

Comments are closed.