
ಹೈದರಾಬಾದ್: ಖಾಸಗಿ ಟಿವಿ ಚಾನೆಲ್ ವೊಂದರ ಸುದ್ದಿ ನಿರೂಪಕಿ ತನ್ನ ಮನೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ಮೂಸಾಪೇಟ್ ನಲ್ಲಿ ಭಾನುವಾರ ತಡರಾತ್ರಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಆಂಧ್ರಪ್ರದೇಶದ ಖ್ಯಾತ ತೆಲುಗು ಟಿವಿ ಚಾನೆಲ್ ನ ನ್ಯೂಸ್ ಆ್ಯಂಕರ್ ರಾಧಿಕಾ ರೆಡ್ಡಿ(36) ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಆಕೆಯ ಬ್ಯಾಗ್ ನಲ್ಲಿ ಸಿಕ್ಕಿರುವ ಸೂಸೈಡ್ ನೋಟ್ ನಲ್ಲಿ, ನನ್ನ ಮೆದುಳೇ ನನ್ನ ಶತ್ರು ಎಂದು ಬರೆದಿರುವುದಾಗಿ ಎನ್ ಡಿಟಿವಿ ವರದಿ ವಿವರಿಸಿದೆ.
ಕುಕಾಟ್ ಪಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಜೀದ್ ಎಎನ್ಐ ಜತೆ ಮಾತನಾಡಿದ್ದು, ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ಕೂಡಲೇ ರಾಧಿಕಾ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿಸಿದ್ದಾರೆ.
5ನೇ ಮಹಡಿಯಿಂದ ಕೆಳಗೆ ಹಾರಿದ್ದು, ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ಮಜೀದ್ ಹೇಳಿದ್ದಾರೆ. ಆರು ತಿಂಗಳ ಹಿಂದಷ್ಟೇ ರಾಧಿಕಾ ಪತಿಯಿಂದ ವಿಚ್ಛೇದನ ಪಡೆದಿದ್ದರು. ಆ ಬಳಿಕ ತನ್ನ 14 ವರ್ಷದ ಮಗ ಮತ್ತು ರಾಧಿಕಾ ಪೋಷಕರ ಜತೆ ವಾಸಿಸುತ್ತಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.