ರಾಷ್ಟ್ರೀಯ

ಡೇಟಾ ಲೀಕ್‌ ಹಗರಣ: ಕೇಂಬ್ರಿಡ್ಜ್‌ ಅನಾಲಿಟಿಕಾ ಸಿಇಓ ಕಚೇರಿಯಲ್ಲಿ ಕಾಂಗ್ರೆಸ್‌ ಪೋಸ್ಟರ್‌ ಪತ್ತೆ

Pinterest LinkedIn Tumblr


ಹೊಸದಿಲ್ಲಿ: ಚುನಾವಣೆಗಳ ಮೇಲೆ ಪ್ರಭಾವ ಬೀರಲು ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕದ್ದ ಆರೋಪಕ್ಕೆ ಗುರಿಯಾಗಿರುವ ಲಂಡನ್‌ನ ಕೇಂಬ್ರಿಡ್ಜ್‌ ಅನಾಲಿಟಿಕಾದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ ಪೋಸ್ಟರ್‌ ಪತ್ತೆಯಾಗಿದೆ.

ಈ ಸಂಸ್ಥೆ ಜತೆ ತನಗೇನೂ ಸಂಬಂಧವಿಲ್ಲ ಎಂದು ಕಾಂಗ್ರೆಸ್‌ ಹೇಳಿಕೊಂಡಿದ್ದರೂ ಈಗ ದೊರೆತಿರುವ ದಾಖಲೆಗೆ ಅದು ವಿವರಣೆ ನೀಡಬೇಕಿದೆ. ಪತ್ರಕರ್ತ ಹಾಗೂ ಟೆಕ್‌ ಬ್ಲಾಗರ್‌ ಜಾಮೀ ಬರ್‌ಟ್ಲೆಟ್‌ ಈ ದಾಖಲೆ ಬಿಡುಗಡೆ ಮಾಡಿದ್ದಾರೆ.

‘ಸೀಕ್ರೆಟ್ಸ್‌ ಆಫ್‌ ದ ಸಿಲಿಕಾನ್‌ ವ್ಯಾಲಿ’ ಎಂಬ ಎರಡು ಕಂತುಗಳಲ್ಲಿ ಪ್ರಸಾರವಾದ ಬಿಬಿಸಿ ಸಾಕ್ಷ್ಯಚಿತ್ರದಲ್ಲಿ (ಡಾಕ್ಯುಮೆಂಟರಿ) ಕೇಂಬ್ರಿಡ್ಜ್‌ ಅನಾಲಿಟಿಕಾದ ಅಂದಿನ ಸಿಇಓ ಅಲೆಕ್ಸಾಂಡರ್‌ ನಿಕ್ಸ್‌ ಅವರ ಲಂಡನ್‌ ಕಚೇರಿಯಲ್ಲಿ ಕಾಂಗ್ರೆಸ್‌ ಚಿಹ್ನೆಯಿರುವ ಪೋಸ್ಟರ್‌ ಪತ್ತೆಯಾಗಿರುವುದನ್ನು ತೋರಿಸಲಾಗಿದೆ.
ಬರ್ಟ್ಲೆಟ್‌ ಅವರು ನಿಕ್ಸ್‌ರನ್ನು ಭೇಟಿಯಾಗುವ ವೇಳೆ ಕಾಂಗ್ರೆಸ್‌ ಪೋಸ್ಟರ್‌ ಅಲ್ಲಿತ್ತು ಎಂಬುದನ್ನು ಸಾಕ್ಷ್ಯಚಿತ್ರ ತೋರಿಸಿದೆ. ಕೈ ಚಿಹ್ನೆಯ ಪೋಸ್ಟರ್‌ನಲ್ಲಿ ಕಾಂಗ್ರೆಸ್‌ ಹೆಸರೂ ದಪ್ಪಕ್ಷರಗಳಲ್ಲಿ ಮುದ್ರಣವಾಗಿತ್ತು. ಪೋಸ್ಟರ್‌ನಲ್ಲಿ ‘ಎಲ್ಲರಿಗೂ ಅಭಿವೃದ್ಧಿ’ (ಡೆವಲಪ್‌ಮೆಂಟ್‌ ಫಾರ್‌ ಆಲ್‌) ಎಂಬ ಘೋಷಣೆಯನ್ನೂ ಬರೆಯಲಾಗಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚುನಾವಣೆ ಪ್ರಚಾರದಲ್ಲಿ ತಂತ್ರಜ್ಞಾನದ ಪಾತ್ರ ಕುರಿತು ಬರ್ಟ್ಲೆಟ್‌ ಡಾಕ್ಯುಮೆಂಟರಿ ಹಲವು ಮಹತ್ವದ ಅಂಶಗಳನ್ನು ಹೊರಹಾಕಿದೆ. ಸಾಕ್ಷ್ಯಚಿತ್ರದಲ್ಲಿ ಸಂದರ್ಶಿಸಲಾದ ಹಲವು ವ್ಯಕ್ತಿಗಳಲ್ಲಿ ನಿಕ್ಸ್‌ ಕೂಡ ಒಬ್ಬರು. ಭಾರತದಲ್ಲಿ ಕೇಂಬ್ರಿಡ್ಜ್‌ ಅನಾಲಿಟಿಕಾದ ವ್ಯವಹಾರದ ಬಗ್ಗೆ ನಿಕ್ಸ್‌ ಏನನ್ನೂ ಹೇಳಿಲ್ಲ; ಆದರೆ ಅವರ ಹಿಂದೆ ಗೋಡೆಯಲ್ಲಿದ್ದ ಪೋಸ್ಟರ್‌ ಮಾತ್ರ ಅವರ ಕಂಪನಿಯ ಪ್ರಮುಖ ಗಿರಾಕಿಯೊಬ್ಬರ ಹೆಮ್ಮೆಯ ಸಂಕೇತದಂತಿತ್ತು

ಅನಾಲಿಟಿಕಾ ಕಚೇರಿಯಲ್ಲಿ ಕಾಂಗ್ರೆಸ್‌ ಪೋಸ್ಟರ್‌
ಮತದಾರರ ಮೇಲೆ ಪ್ರಭಾವ ಬೀರಲು ಮತ್ತು ಸಾಮೂಹಿಕ ನಡವಳಿಕೆಗಳನ್ನು ನಿಯಂತ್ರಿಸಲು ಸಿಲಿಕಾನ್ ವ್ಯಾಲಿ ಹೇಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ ಎಂಬುದನ್ನು ಈ ಸಾಕ್ಷ್ಯಚಿತ್ರ ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು.

‘ಇದು ಈ ಶತಮಾನದಲ್ಲೇ ಅತಿದೊಡ್ಡ ರಾಜಕೀಯ ಕಂಪನ ಸೃಷ್ಟಿಸಿದ ಘಟನೆ. ಆದರೆ ಡೊನಾಲ್ಡ್ ಟ್ರಂಪ್‌ ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ಬದಿಗೊತ್ತಿ ಹೇಗೆ ಗೆದ್ದು ಬಂದರು?’ ಎಂಬ ಪ್ರಶ್ನೆಯೊಂದಿಗೆ ಬರ್ಟ್ಲೆಟ್‌ ಆರಂಭಿಸುತ್ತಾರೆ.

ಮತದಾರರ ಮಾನಸಿಕತೆಯ ಚಿತ್ರಣವನ್ನು ಹೇಗೆ ತಯಾರಿಸಲಾಯಿತು ಎಂದು ನಿಕ್ಸ್‌ ವಿವರಿಸಿದ ಬಳಿಕ, ‘ಮತದಾರರ ವ್ಯಕ್ತಿಚಿತ್ರಗಳನ್ನು ಊಹಿಸಲು ಅಗತ್ಯವಾದ ಮಾಹಿತಿ ಎಲ್ಲಿಂದ ಪಡೆದಿರಿ?’ ಎಂದು ಬರ್ಟ್ಲೆಟ್‌ ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸಿದ ನಿಕ್ಸ್‌, ‘ದೂರವಾಣಿ ಸಮೀಕ್ಷೆಗಳ ಜತೆಗೆ ಹಲವು ಆನ್‌ಲೈನ್ ವೇದಿಕೆಗಳನ್ನು ಬಳಸಿಕೊಂಡೆವು. ಹೆಚ್ಚು ಹೆಚ್ಚು ಡೇಟಾಗಳನ್ನು ನಾವು ಸಂಗ್ರಹಿಸುತ್ತಿದ್ದಂತೆ, ಫೇಸ್‌ಬುಕ್‌ನಂತಹ ಇತರ ವೇದಿಕೆಗಳನ್ನೂ ನಾವು ಸಂಪರ್ಕಿಸಿದೆವು’ ಎಂದು ತಿಳಿಸುತ್ತಾರೆ.

ಮತದಾರರ ವ್ಯಕ್ತಿತ್ವದ ಬಗ್ಗೆ ಅತ್ಯಲ್ಪ ಮಾಹಿತಿ ಪಡೆದುಕೊಂಡು ಅವರ ಮೇಲೆ ಒತ್ತಡ ಹೇರಲು ಹೇಗೆ ಸಾಧ್ಯ? ಎಂಬ ಬರ್ಟ್ಲೆಟ್‌ ಅವರ ಅಚ್ಚರಿಯ ಪ್ರಶ್ನೆಗೆ ನಿಕ್ಸ್‌ ‘ಇಲ್ಲ, ಅದನ್ನು ಹೇಳಲಾಗದು. ಸಾಮೂಹಿಕ ಜಾಹೀರಾತುಗಳ ಬದಲು ವೈಯಕ್ತೀಕರಿಸಿದ ಜಾಹೀರಾತುಗಳ ಮೂಲಕ ಮತದಾರರ ಮನವೊಲಿಸಬಹುದು. ಇಂತಹ ಮನವೊಲಿಕೆಗಳಿಂದ ಮತದಾರರ ನಿಲುವು ಮತ್ತಷ್ಟು ಗಟ್ಟಿಗೊಳ್ಳಬಹುದು’ ಎಂದು ಉತ್ತರಿಸುತ್ತಾರೆ.

ಜನರ ಖಾಸಗಿ ಮಾಹಿತಿಗಳನ್ನು ಸಾರ್ವಜನಿಕ ವೇದಿಕೆಗಳನ್ನು ಬಳಸುವುದನ್ನು ಕಂಪನಿ ಸಮರ್ಥಿಸಿಕೊಂಡಿದೆ. ಅದಕ್ಕೆ ಸೂಪರ್ ಮಾರ್ಕೆಟ್‌ ಲಾಯಲ್ಟಿ ಕಾರ್ಡ್‌ಗಳ ಉದಾಹರಣೆಯನ್ನೂ ನಿಕ್ಸ್‌ ನೀಡಿದ್ದಾರೆ. ರಾಜಕೀಯ ಮತ್ತು ಶಾಪಿಂಗ್‌ನಲ್ಲಿ ಜನರ ವರ್ತನೆ ಒಂದೇ ರೀತಿಯಾಗಿರುವುದೆ? ಎಂಬ ಬರ್ಟ್ಲೆಟ್‌ ಪ್ರಶ್ನೆಗೆ ‘ಎರಡರಲ್ಲೂ ಬಳಸುವ ತಂತ್ರಜ್ಞಾನ ಒಂದೇ. ಮುಂದಿನ 10 ವರ್ಷಗಳಲ್ಲಿ ಅಗಾಧ ಪ್ರಮಾಣದ ಡೇಟಾ ಲಭ್ಯವಾಗಲಿದೆ. ಮಾರ್ಕೆಟಿಂಗ್‌ ಮತ್ತು ಸಂವಹನ ಕುರಿತ ಡೇಟಾಗಳಿಂದಲೇ ಜನರ ವ್ಯಕ್ತಿತ್ವಗಳನ್ನು ಗ್ರಹಿಸಬಹುದು. ಇದು ಕ್ರಾಂತಿಕಾರಿಯಾಗಿ ಬೆಳೆಯುತ್ತಿದೆ. ನೀವು ಇದನ್ನು ಒಪ್ಪಿದರೂ ಒಪ್ಪದಿದ್ದರೂ, ಇದೊಂದು ಕಟು ವಾಸ್ತವ ಎಂಬುದಂತೂ ಸತ್ಯ’ ಎಂದು ನಿಕ್ಸ್‌ ವಿವರಿಸುತ್ತಾರೆ.

ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಸೋರಿಕೆ ಬಯಲಾದ ಬಳಿಕ, ಕೇಂಬ್ರಿಡ್ಜ್ ಅನಾಲಿಟಿಕಾದ ಗ್ರಾಹಕನೆಂದು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪರಸ್ಪರ ದೋಷಾರೋಪ ಮಾಡಿಕೊಂಡಿದ್ದವು. ಈ ಹಗರಣವನ್ನು ಬಯಲಿಗೆಳೆದ ಕ್ರಿಸ್ತೋಫರ್‌ ವೈಲಿ ಶುಕ್ರವಾರವಷ್ಟೇ ಬ್ರಿಟಿಷ್‌ ಸಂಸದರ ಜತೆ ಮಾತನಾಡುತ್ತ, ಕಾಂಗ್ರೆಸ್ಸೇ ಈ ಕಂಪನಿಯ ಗ್ರಾಹಕನೆಂದು ತಾವು ‘ನಂಬಿರುವುದಾಗಿ’ ತಿಳಿಸಿದ್ದಾರೆ.

ಕೇಂಬ್ರಿಡ್ಜ್‌ ಅನಾಲಿಟಿಕಾ ಜತೆ ತನಗೇನೂ ಸಂಬಂಧವಿಲ್ಲವೆಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಆದರೆ ಅಲೆಕ್ಸಾಂಡರ್‌ ನಿಕ್ಸ್‌ ಮಾತ್ರ ತಮ್ಮ ಕಚೇರಿಯಲ್ಲಿ ಕಾಂಗ್ರೆಸ್‌ ಚಿಹ್ನೆಯನ್ನು ಪ್ರದರ್ಶಿಸಲು ಯಾವುದೇ ಹಿಂಜರಿಕೆ ತೋರಿಲ್ಲ.

Comments are closed.