ರಾಷ್ಟ್ರೀಯ

ನಕಲಿ ಬ್ಯಾಂಕ್ ಶಾಖೆ ತೆರೆದು ವಂಚಿಸುತ್ತಿದ್ದ ವ್ಯಕ್ತಿ ಪೊಲೀಸ್ ಬಲೆಗೆ!

Pinterest LinkedIn Tumblr


ವಾರಣಾಸಿ: ಇತ್ತೀಚೆಗೆ ದೇಶದಲ್ಲಿ ಬ್ಯಾಂಕ್ ಗಳಲ್ಲಿನ ಬಹುಕೋಟಿ ವಂಚನೆ ಪ್ರಕರಣಗಳು ಬಯಲಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆದರೆ ಉತ್ತರಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ನಡೆದಿರುವ ವಂಚನೆ ಪ್ರಕರಣ ನಿಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ!

ಉತ್ತರಪ್ರದೇಶ ಬಾಲಿಯಾ ಜಿಲ್ಲೆಯ ಮುಲಾಯಂ ನಗರದ ಫೆಮ್ನಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕರ್ನಾಟಕ ಬ್ಯಾಂಕ್ ನ ನಕಲಿ ಶಾಖೆ ತೆರೆದು ಹಣವನ್ನು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ನಕಲಿ ಬ್ಯಾಂಕ್ ಶಾಖೆ ತೆರೆದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದು, ಆತನಿಂದ 1.37 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಬದ್ವಾನ್ ನಿವಾಸಿ ಆಫಾಖ್ ಅಹ್ಮದ್ ಎಂಬಾತ ವಿನೋದ್ ಕುಮಾರ್ ಕಾಂಬ್ಳಿ(ಕ್ರಿಕೆಟಿಗ ವಿನೋದ್ ಕಾಂಬ್ಳಿ ಹೆಸರಿನ ಪ್ರೇರಣೆ!) ಎಂಬ ನಕಲಿ ಹೆಸರಿನಲ್ಲಿ ಈ ನಕಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ನಕಲಿ ಹೆಸರಿನಲ್ಲಿಯೇ ಆಧಾರ್ ಕಾರ್ಡ್ ಅನ್ನು ಪಡೆದಿದ್ದ, ಅಷ್ಟೇ ಅಲ್ಲ ತಾನು ಮುಂಬೈ ವ್ಯಕ್ತಿ ಎಂಬುದಾಗಿ ಗುರುತು ಚೀಟಿ ಮಾಡಿಸಿಕೊಂಡಿದ್ದ ಎಂಬುದಾಗಿ ವರದಿ ವಿವರಿಸಿದೆ.

ಅಹ್ಮದ್ ಸ್ಥಳೀಯರಿಂದ 15 ಉಳಿತಾಯ ಖಾತೆ ಹಾಗೂ ಠೇವಣಿಯಿಂದ 1 ಕೋಟಿ 37 ಲಕ್ಷ ರೂಪಾಯಿ ಹಣವನ್ನು ಸಂಗ್ರಹಿಸಿದ್ದ. ನಕಲಿ ಬ್ಯಾಂಕ್ ಶಾಖೆಗೆ ದಾಳಿ ನಡೆಸಿದ್ದ ಪೊಲೀಸರು ಅಪಾರ ಪ್ರಮಾಣದ ಲೆಡ್ಜರ್ ಪುಸ್ತಕಗಳು, ಪಾಸ್ ಬುಕ್ ಗಳು, ಕಂಪ್ಯೂಟರ್, ಲ್ಯಾಪ್ ಟ್ಯಾಪ್ ಹಾಗೂ ಪೀಠೋಪಕರಣಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ದೆಹಲಿಯ ಹೆಚ್ಚುವರಿ ಜನರಲ್ ಮ್ಯಾನೇಜರ್ ಅವರ ದೂರಿನ ಮೇರೆಗೆ ಉತ್ತರಪ್ರದೇಶ ಪೊಲೀಸರು ಬಾಲಿಯಾ ನಕಲಿ ಶಾಖೆ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

-ಉದಯವಾಣಿ

Comments are closed.