ರಾಷ್ಟ್ರೀಯ

ಫೇಸ್‌ಬುಕ್‌ಗೆ ಭಾರತದ ಪರ್ಯಾಯ ಕಂಡುಕೊಳ್ಳಲು ಆನಂದ್ ಮಹಿಂದ್ರಾ ಪ್ರೋತ್ಸಾಹ

Pinterest LinkedIn Tumblr


ದೆಹಲಿ: ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ಗೆ ಪ್ರತಿಯಾಗಿ ಭಾರತೀಯ ಸ್ಟಾರ್ಟ್‌ಅಪ್‌ ಮೂಲಕ ದೇಸೀ ಸಾಮಾಜಿಕ ಜಾಲತಾಣ ಅಭಿವೃದ್ಧಿಪಡಿಸಲು ಇಚ್ಛಿಸುವುದಾಗಿ ಮಹಿಂದ್ರಾ ಸಮೂಹದ ಮುಖ್ಯಸ್ಥ ಆನಂದ್ ಮಹಿಂದ್ರಾ ತಿಳಿಸಿದ್ದಾರೆ.

ಕೇಂಬ್ರಿಡ್ಜ್‌ ಅನಲಿಟಿಕಾ ಕಾಂಡ ಬಳಿಕ ಫೇಸ್‌ಬುಕ್‌ನ ಇಮೇಜ್‌ಗೆ ಅಲ್ಪಮಟ್ಟದ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ, ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಮುಂದಿಟ್ಟ ಮಹಿಂದ್ರಾ ಫೇಸ್‌ಬುಕ್‌ಗೆ ಪರ್ಯಾಯವಾದ ಸಾಮಾಜಿಕ ಜಾಲತಾಣವೊಂದನ್ನು ಭಾರತದಲ್ಲೇ ಆರಂಭಿಸಲು ಸೂಕ್ತ ಸಮಯ ಬಂದಿಲ್ಲವೇ ಎಂದಿದ್ದಾರೆ.

ಫೇಸ್‌ಬುಕ್‌ನ ಭಾರತದ ವರ್ಶನ್‌ಅನ್ನು ನಿರ್ವಹಿಸಲು ಮುಂದಾಗುವ ಯಾವುದೇ ಸ್ಟಾರ್ಟ್‌ ಅಪ್‌ಗೆ ಆರ್ಥಿಕ ನೆರವು ನೀಡುವುದಾಗಿ ಮಹಿಂದ್ರಾ ಘೋಷಿಸಿದ್ದಾರೆ.

“ವೃತ್ತಿಪರವಾಗಿ ನಿರ್ವಹಿಸಲಾದ, ವ್ಯಾಪಕವಾದ ಹಾಗು ಉತ್ತಮ ನಿಂಯತ್ರಣದಲ್ಲಿರುವ ನಮ್ಮದೇ ಸಾಮಾಜಿಕ ಜಾಲತಾಣ ಸಂಸ್ಥೆಯೊಂದನ್ನು ಆರಂಭಿಸಲು ಇದು ಸೂಕ್ತ ಸಂದರ್ಭ ಎನಿಸುತ್ತಿದೆಯೇ? ಈ ಕುರಿತು ಕೆಲಸ ಮಾಡಲು ಯಾವುದಾದರೂ ಭಾರತೀಯ ಸ್ಟಾರ್ಟ್‌ ಅಪ್‌ ಉತ್ಸುಕವಾಗಿದೆಯೇ? ಹಾಗಿದ್ದಲ್ಲಿ ಪ್ರಾರಂಭಿಕ ಹಂತದಲ್ಲಿ ಆರ್ಥಿಕ ನೆರವು ನೀಡುವ ಕುರಿತಂತೆ ಆಲೋಚಿಸುತ್ತೇನೆ” ಎಂದು ಟ್ವಿಟರ್‌ನಲ್ಲಿ ಮಹಿಂದ್ರಾ ತಿಳಿಸಿದ್ದಾರೆ.

ತನ್ನ ಐದು ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಬ್ರಿಟನ್‌ನ ಮಾಹಿತಿ ಪರಿಶೀಲನೆ ಸಂಸ್ಥೆ, ಕೇಂಬ್ರಿಡ್ಜ್‌ ಅನಲಿಟಿಕಾದೊಂದಿಗೆ ಹಂಚಿಕೊಳ್ಳುವ ಮೂಲಕ ಬಳಕೆದಾರರ ಖಾಸಗಿತನ ಹಕ್ಕಿನ ವಿಚಾರದಲ್ಲಿ ತಲೆ ತೂರಿಸಿದೆ ಎಂಬ ಬಲವಾದ ಆರೋಪ ಕೇಳಿ ಬರುತ್ತಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಪ್ರಭಾವ ಬೀರಲು ಈ ಮಾಹಿತಿಗಳನ್ನು ಬಳಸಲಾಗಿತ್ತು ಎಂದು ಕೇಳಿಬಂದಿದೆ.

ಇದೇ ವಿಚಾರವಾಗಿ ಭಾರತದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್‌ ಪಕ್ಷಗಳ ನಡುವೆ ಪರಸ್ಪರ ಕೆಸರೆರಚಾಟ ನಡೆದಿದೆ.

ಭುಗಿಲೆದ್ದಿರುವ ವಿವಾದದಿಂದ ದೋಷಮುಕ್ತನಾಗಿ ಬರಲು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಫೇಸ್‌ಬುಕ್‌ಗೆ ತಿಳಿಸಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆಅಡಿ ದೇಶದಲ್ಲಿ ನಡೆಯಲಿರುವ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಲ್ಲಿ ಝುಕರ್‌ಬರ್ಗ್‌ಗೆ ಸಮನ್ಸ್ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

Comments are closed.