ರಾಷ್ಟ್ರೀಯ

ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್‌: 20.5 ಕೋಟಿ ಹೊಸ ಬಳಕೆದಾರರ ಸೇರ್ಪಡೆ ಸಾಧ್ಯ

Pinterest LinkedIn Tumblr


ಹೊಸದಿಲ್ಲಿ: ಜನರ ಆಯ್ಕೆಯ ಭಾಷೆಯಲ್ಲಿ (ಲಿಪಿಗಳಲ್ಲಿ) ಇಂಟರ್‌ನೆಟ್‌ ಸೇವೆ ಒದಗಿಸಿದರೆ ಈ ವರೆಗೆ ಇಂಟರ್‌ನೆಟ್ ಬಳಸದ 20.5 ಕೋಟಿ ಬಳಕೆದಾರರು ಡಿಜಿಟಲ್‌ ಜಗತ್ತಿಗೆ ತೆರೆದುಕೊಳ್ಳಲಿದ್ದಾರೆ ಎಂದು ‘ಇಂಟರ್‌ನೆಟ್‌ ಇನ್‌ ಇಂಡಿಕ್‌ 2017’ ವರದಿ ತಿಳಿಸಿದೆ.
ಭಾರತೀಯ ಇಂಟರ್‌ನೆಟ್‌ ಮತ್ತು ಮೊಬೈಲ್‌ ಅಸೋಸಿಯೇಶನ್‌ (IAMAI) ಮತ್ತು ಕಂಟಾರ್‌ ಐಎಂಆರ್‌ಬಿ ಜಂಟಿಯಾಗಿ ಈ ವರದಿ ಸಿದ್ಧಪಡಿಸಿವೆ.

ಭಾರತದ ಒಟ್ಟು 48.1 ಕೋಟಿ ಇಂಟರ್‌ನೆಟ್ ಬಳಕೆದಾರರ ಪೈಕಿ ಅಂದಾಜು 33.5 ಕೋಟಿ ಮಂದಿ ಭಾರತೀಯ ಭಾಷೆಗಳಲ್ಲೇ ಇಂಟರ್‌ನೆಟ್‌ ಬೇಕೆನ್ನುವ ವಿಶಿಷ್ಟ ವರ್ಗದವರಲ್ಲ. ಈ ಪೈಕಿ 19.3 ಕೋಟಿ ಸಾಮಾನ್ಯ ಬಳಕೆದಾರರು (non-unique- ವಿಶಿಷ್ಟವಲ್ಲದ) (ಶೇ.58) ನಗರ ಪ್ರದೇಶದವರಾಗಿದ್ದರೆ, 14.1 ಕೋಟಿ ಸಾಮಾನ್ಯ ಬಳಕೆದಾರರು (ಶೇ 42) ಗ್ರಾಮೀಣ ಭಾರತದವರು. (ಇಲ್ಲಿ ವಿಶಿಷ್ಟವಲ್ಲದ ಎಂದರೆ ಭಾರತೀಯ ಭಾಷೆಗಳಲ್ಲೇ ಇಂಟರ್‌ನೆಟ್‌ ಬೇಕು ಎನ್ನುವವರಲ್ಲ ಎಂದು ಅರ್ಥ. ಅವರ ಬಳಕೆಯ ಒಂದು ಸಣ್ಣ ಭಾಗ ಮಾತ್ರ ಭಾರತೀಯ ಭಾಷೆಗಳಲ್ಲಿರುತ್ತದೆ.)
ಅಧ್ಯಯನ ವರದಿಯ ಪ್ರಕಾರ, ಗ್ರಾಮೀಣ ಭಾರತದಲ್ಲಿ (ಶೇ 76) ನಗರ ಭಾರತಕ್ಕಿಂತ (ಶೇ 66) ಸ್ವಲ್ಪ ಹೆಚ್ಚು ಮಂದಿ ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಸುತ್ತಾರೆ. ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದ ವರ್ಗದವರಲ್ಲಿ ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಕೆ ಹೆಚ್ಚಿದೆ. ಇಂತಹ ಬಳಕೆದಾರರ ಪ್ರಮಾಣ ನಗರ ಮತ್ತು ಗ್ರಾಮೀಣ ಭಾರತದಲ್ಲಿ ಸುಮಾರು ಶೇ 80ರಷ್ಟಿದೆ.

ಇಂಟರ್‌ನೆಟ್‌ನಲ್ಲಿ ಭಾರತೀಯ ಭಾಷೆಗಳ ಡೇಟಾ ಬಳಕೆಯಲ್ಲಿ ಬಳಕೆದಾರರ ವಯಸ್ಸು ಪ್ರಮುಖ ಅಂಶವಾಗಿದೆ. ನಗರ ಭಾರತದ ಶೇ 75ರಷ್ಟು ಬಳಕೆದಾರರು 45 ವರ್ಷ ಮೇಲ್ಪಟ್ಟವರಾಗಿದ್ದರೆ, ಗ್ರಾಮೀಣ ಭಾರತದ ಶೇ 85ರಷ್ಟು ಬಳಕೆದಾರರು 45 ವರ್ಷ ಮೇಲ್ಪಟ್ಟವರು ಎಂದು ಅಧ್ಯಯನ ಹೇಳಿದೆ.
ನಗರ ಪ್ರದೇಶಗಳಲ್ಲಿ ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್ ಬಳಸುವವರು ಸಂಗೀತ/ ವೀಡಿಯೋ ಸುದ್ದಿ ಮತ್ತು ಇತರ ಬಗೆಯ ಮನರಂಜನಾ ವಿಷಯಗಳಿಗೆ ಸೀಮಿತವಾಗಿದ್ದಾರೆ. ಭಾರತೀಯ ಭಾಷೆಗಳ ಇಂಟರ್‌ನೆಟ್‌ ಬಳಕೆಯಲ್ಲಿ ಒಟ್ಟಾರೆ ಶೇ 70ರಷ್ಟು ಬಳಕೆದಾರರು ಇಂತಹ ಚಟುವಟಿಕೆಗಳಿಗಷ್ಟೇ ಸೀಮಿತರಾಗಿದ್ದಾರೆ.
ಆನ್‌ಲೈನ್‌ ಬ್ಯಾಂಕಿಂಗ್‌, ಉದ್ಯೋಗ ಹುಡುಕಾಟ (ಜಾಬ್‌ ಸರ್ಚ್‌) ಅಥವಾ ಟಿಕೆಟ್‌ ಬುಕಿಂಗ್‌ನಂತಹ (ಭಾರತದ ಇ-ಕಾಮರ್ಸ್‌ ವ್ಯವಹಾರಗಳಲ್ಲಿ ಇದೇ ಹೆಚ್ಚು ಜನಪ್ರಿಯ) ಚಟುವಟಿಕೆಗಳು ಅತಿ ಕಡಿಮೆಯಿದೆ (ಶೇ.20).

ಬಹುತೇಕ ಇಂಟರ್‌ನೆಟ್ ಬಳಕೆದಾರರಿಗೆ ಮೊದಲ ಹೆಜ್ಜೆಯಾಗಿರುವ ಸರ್ಚ್‌ ಎಂಜಿನ್‌ ಮೂಲಕ ಅಂತರ್ಜಾಲ ಪ್ರವೇಶಿಸುವವರಲ್ಲೂ ಭಾರತೀಯ ಭಾಷೆಗಳನ್ನು ಬಳಸುವವರು ಶೇ 39 ಮಂದಿ ಮಾತ್ರ ಇದ್ದಾರೆ.
Indic 2
ಆರ್ಥಿಕವಾಗಿ ದುರ್ಬಲ ವರ್ಗದವರು ಮತ್ತು ಗ್ರಾಮೀಣ ಭಾರತದ ಮಂದಿಗೆ ಇಂಟರ್‌ನೆಟ್‌ ಪ್ರವೇಶ ದುರ್ಲಭವಾಗಿರುವುದಕ್ಕೆ ಭಾರತೀಯ ಭಾಷೆಗಳ ಸೇವೆ ಲಭ್ಯತೆ ಇಲ್ಲದಿರುವುದು ಕೂಡ ಕಾರಣವಾಗಿದೆ ಎಂದು ಐಎಎಂಎಐ ಅಧ್ಯಯನ ತಿಳಿಸಿದೆ.

ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಕೆಗೆ ಉತ್ತೇಜನ ದೊರೆತರೆ ಶೇ 23ರಷ್ಟು ಮಂದಿ (20.5 ಕೋಟಿ) ಹೊಸ ಬಳಕೆದಾರರು ಡಿಜಿಟಲ್‌ ಜಗತ್ತಿಗೆ ಪ್ರವೇಶಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.

ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್‌ ಸೇವೆಯೆಂದರೆ ಇಡೀ ಡಿಜಿಟಲ್‌ ಜಗತ್ತಿನಲ್ಲೇ ಬದಲಾವಣೆಯಾಗಬೇಕಾಗುತ್ತದೆ. ಯುಆರ್‌ಎಲ್‌ಗಳು, ಡೊಮೈನ್‌ ನೇಮ್‌ಗಳು, ಕೀ ಟ್ಯಾಗ್‌ಗಳು, ಇಂಡೆಕ್ಸಿಂಗ್‌- ಇತ್ಯಾದಿ ಎಲ್ಲವನ್ನೂ ಭಾರತೀಯ ಭಾಷೆಗಳಲ್ಲಿ ಒದಗಿಸಬೇಕಾಗುತ್ತದೆ. ಆಗ ಮಾತ್ರ ಸಂಪೂರ್ಣ ಡಿಜಿಟಲ್‌ ಇಂಟರ್‌ಫೇಸ್‌ ಬಳಕೆದಾರ ಸ್ನೇಹಿಯಾಗಲು ಸಾಧ್ಯ ಎಂದು ಐಎಎಂಎಐ ಹೇಳಿದೆ.

ಇಂಟರ್ನೆಟ್‌ ಕಂಟೆಂಟ್‌ನಲ್ಲಿ ಮ್ಯಾಂಡರಿನ್ ಲಿಪಿ ಬಳಸುವ ಮೂಲಕ ಚೀನಾ ಜಗತ್ತಿನಲ್ಲೇ ಅತಿದೊಡ್ಡ ಇಂಟರ್‌ನೆಟ್‌ ಬಳಕೆದಾರ ರಾಷ್ಟ್ರವಾಗಿದೆ. ಹೀಗಾಗಿ ಇಂಗ್ಲಿಷ್‌ ಬಳಿಕ ಚೀನೀ ಭಾಷೆಯೇ ಇಂಟರ್‌ನೆಟ್‌ನಲ್ಲಿ ಅತ್ಯಂತ ಜನಪ್ರಿಯತೆ ಪಡೆದ ಭಾಷೆಯಾಗಿದೆ. ಆದರೆ ಭಾರತೀಯ ಭಾಷೆಗಳ ಲಿಪಿಗಳಲ್ಲಿ ಇಂಟರ್‌ನೆಟ್‌ ಕಂಟೆಂಟ್‌ ಕೇವಲ ಶೇ 0.1ರಷ್ಟಿದೆ.

Comments are closed.