ರಾಷ್ಟ್ರೀಯ

ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಅವಘಡ: 3 ಏಮ್ಸ್‌ ವೈದ್ಯರು ಸಾವು

Pinterest LinkedIn Tumblr


ಮಥುರಾ: ಮಥುರಾ ಬಳಿಯ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಿಲ್ಲಿ ಏಮ್ಸ್ ಆಸ್ಪತ್ರೆ ಮೂವರು ವೈದ್ಯರು ಸಾವನ್ನಪ್ಪಿದ್ದು, ನಾಲ್ವರು ವೈದ್ಯರು ಗಂಭೀರ ಗಾಯಗೊಂಡಿದ್ದಾರೆ.

ಮುಂಜಾನೆ ಸುಮಾರು 2 ಗಂಟೆಯ ಸಂದರ್ಭದಲ್ಲಿ ವೈದ್ಯರು ಸಂಚರಿಸುತ್ತಿದ್ದ ಇನ್ನೋವಾ ಕಾರು ಕೈತೈ ಗ್ರಾಮದ ಬಳಿ ಕಂಟೇನರ್‌ಗೆ ಢಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಏಮ್ಸ್‌ ವೈದ್ಯರು ದಾರುಣವಾಗಿ ಮೃತಪಟ್ಟಿದ್ದಾರೆ. ಕಾರು – ಟ್ರಕ್‍ಗೆ ಡಿಕ್ಕಿ ಹೊಡೆದ ರಭಸದಲ್ಲಿ ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರು ವಾಹನದ ನಡುವೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಮೃತರನ್ನು ಎಐಐಎಂಎಸ್ ವೈದ್ಯರಾದ ಡಾ.ಯಶ್ ಪಾಲ್, ಡಾ. ಹರ್ಷದ್ ಮತ್ತು ಡಾ.ಹೆಂಬಾಲ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ಡಾ.ಕದ್ರಿಯೇನ್, ಡಾ. ಮಹೇಶ್, ಡಾ.ಅಭಿನವ್ ಅವರನ್ನು ದಿಲ್ಲಿಯ ಎಐಐಎಂಎಸ್‍ಗೆ ದಾಖಲಿಸಲಾಗಿದೆ.

ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಉಪ ಅಧೀಕ್ಷಕ ವಿಜಯ್‌ ಶಂಕರ್‌ ಮಿಶ್ರಾ, ದಿಲ್ಲಿಯಿಂದ ಆಗ್ರಾಕ್ಕೆ ವೈದ್ಯರು ಸಹೋದ್ಯೋಗಿ ಹರ್ಶದ್‌ ವಾಂಖಡೆ ಜನ್ಮ ದಿನದ ಸಂಭ್ರಮಾಚರಣೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಕಾರನ್ನು ಹರ್ಶದ್‌ ಅವರೇ ಚಲಾಯಿಸುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಅಪಘಾತಕ್ಕೀಡಾದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.