ರಾಷ್ಟ್ರೀಯ

ಮಂದಿರಗಳ ಜಾಗದಲ್ಲಿ ನಿರ್ಮಿಸಿದ ಮಸೀದಿಗಳನ್ನು ಹಿಂದುಗಳಿಗೆ ಮರಳಿಸಿ: ಉ.ಪ್ರ ಶಿಯಾ ವಕ್ಫ್ ಮಂಡಳಿ

Pinterest LinkedIn Tumblr


ಲಖನೌ: ವಿವಾದಿತ ಧಾರ್ಮಿಕ ಸ್ಮಾರಕಗಳ ಬಳಿ ಮುಸ್ಲಿಮರು ನಮಾಝ್‌ ಮಾಡುವುದನ್ನು ನಿಲ್ಲಿಸಬೇಕು ಎಂದು ಉತ್ತರ ಪ್ರದೇಶ ಶಿಯಾ ವಕ್ಫ್‌ ಮಂಡಳಿ ಮುಖ್ಯಸ್ಥ ಡಾ. ವಾಸಿಮ್‌ ರಿಜ್ವಿ ತಿಳಿಸಿದ್ದಾರೆ.

ವಾಸಿಮ್‌ ತಮ್ಮ ಸಲಹೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ನೀಡಿದ್ದಾರೆ. ಇದೇ ವೇಳೆ ದೇಶದಲ್ಲಿ ಏನಿಲ್ಲವೆಂದರೂ ಒಂಬತ್ತು ವಿವಾದಿತ ಧಾರ್ಮಿಕ ಸ್ಥಳಗಳಿವೆ – ಉತ್ತರ ಪ್ರದೇಶದಲ್ಲಿ ನಾಲ್ಕು, ಗುಜರಾತ್‌ನಲ್ಲಿ ಎರಡು, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಹಾಗು ದೆಹಲಿಯಲ್ಲಿ ತಲಾ ಒಂದು” ಎಂದು ರಿಜ್ವಿ ಇದೇ ಸಂದರ್ಭ ತಿಳಿಸಿದ್ದಾರೆ.

ಈ ಸ್ಮಾರಕಗಳು ವಿವಾದಿತವಾದ ಕಾರಣ ಮುಸ್ಲಿಮರು ಇಲ್ಲಿ ನಮಾಝ್‌ ಮಾಡುವುದನ್ನು ನಿಲ್ಲಿಸಬೇಕು ಎಂದು ರಿಜ್ವಿ ಇದೇ ವೇಳೆ ತಿಳಿಸಿದ್ದಾರೆ.

ಅಲ್ಲದೇ ಹಿಂದು ದೇಗುಲಗಳಿಗೆ ಸೇರಿದ ಜಮೀನಿನಲ್ಲಿ ಈ ಮಸೀದಿಗಳನ್ನು ಬಲವಂತವಾಗಿ ಕಟ್ಟಲಾಗಿದೆ ಎಂಬುದಕ್ಕೆ ಐತಿಹಾಸಿಕ ಪುರಾವೆಗಳಿವೆ ಎಂದ ರಿಜ್ವಿ, “ಅನ್ಯ ಧರ್ಮಗಳಿಗೆ ಸೇರಿದ ಭೂಮಿಯಲ್ಲಿ ಮಸೀದಿ ಕಟ್ಟುವುದನ್ನು ಇಸ್ಲಾಂ ವಿರೋಧಿಸುತ್ತದೆ ಮಾತ್ರವಲ್ಲದೇ ಅಂತಹ ಜಾಗಗಳಲ್ಲಿ ಮಾಡಲಾಗುವ ಪ್ರಾರ್ಥನೆಗಳನ್ನು ಕುರ್‌’ಆನ್‌ ಅಥವಾ ಶರಿಯಾ ಒಪ್ಪುವುದಿಲ್ಲ” ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಅಯೋಧ್ಯೆಯ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಮರಳಿಸಲು ರಿಜ್ವಿ ಈ ಮುನ್ನ ಸಲಹೆ ನೀಡಿದ್ದರು. ಅಲ್ಲದೇ ಮಥುರಾ, ವಾರಣಾಸಿ ಹಾಗು ಇನ್ನಿತರ ಜಾಗಗಳಲ್ಲಿದ್ದ ದೇಗುಲಗಳನ್ನು ಧ್ವಂಸಗೊಳಿಸಿ ಮಸೀದಿಗಳ ನಿರ್ಮಾಣ ಮಾಡಲಾಗಿದೆ ಎಂದು ಶಿಯಾ ಮಂಡಳಿ ಈ ಮುನ್ನ ತಿಳಿಸಿತ್ತು.

ಅಯೋಧ್ಯೆಯ ರಾಮ ಜನ್ಮಭೂಮಿ ಸೇರಿದಂತೆ ಒಂಬತ್ತು ಧಾರ್ಮಿಕ ಕ್ಷೇತ್ರಗಳನ್ನು ಹಿಂದುಗಳಿಗೆ ಮರಳಿಸಬೇಕಿದೆ ಎಂದು ಶಿಯಾ ಮಂಡಳಿ ಹೇಳುತ್ತಲೇ ಬಂದಿದೆ.

ಅಯೋಧ್ಯೆಯ ಬಾಬ್ರಿ ಮಸೀದಿ, ಮಥುರಾದ ಕೇಸವ್‌ ದೇವ್ ಮಂದಿರ, ವಾರಣಾಸಿಯ ಕಾಶಿ ವಿಶ್ವನಾಥ ದೇಗುಲ, ಜಾನ್‌ಪುರದ ಅತವ್‌ ದೇವ ಮಂದಿರ, ಗುಜರಾತ್‌ನ ಬಾಟ್ನಾದಲ್ಲಿರುವ ರುದ್ರ ಮಹಾಲಯ ದೇಗುಲ, ಅಹಮದಾಬಾದ್‌ನ ಭದ್ರಕಾಳಿ ದೇಗುಲ, ಪಶ್ಚಿಮ ಬಂಗಾಳದ ಪಾಂಡುವಾದಲ್ಲರಿವ ಅದಿನಾ ಮಸೀದಿ, ಮಧ್ಯ ಪ್ರದೇಶದ ವಿಧಿಶಾದಲ್ಲಿರುವ ವಿಜಯ ದೇಗುಲ ಹಾಗು ದೆಹಲಿಯ ಕುವುತುಲ್‌ ಇಸ್ಲಾಂ ಕುತುಬ್‌ ಮಸೀದಿಗಳನ್ನು ಹಿಂದುಗಳಿಗೆ ಬಿಟ್ಟುಕೊಡಬೇಕಿದೆ ಎಂದು ರಿಜ್ವಿ ತಿಳಿಸಿದ್ದಾರೆ.

ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ್‌ ಗುರೂಜಿ ವಾರಣಾಸಿ ಹಾಗು ಗೊರಖ್ಪುರದಲ್ಲಿ ಇದೇ ವಿಚಾರವಾಗಿ ಮಾತನಾಡಿ ಬಾಬ್ರಿ ಮಸೀದಿ ಇದ್ದ ಜಾಗವನ್ನು ಹಿಂದೂಗಳಿಗೆ ಮರಳಿಸಲು ಕೋರಿದ್ದರು. ಸುಪ್ರೀಂ ಕೋರ್ಟ್‌ ಮುಂದೆ ಇರುವ ಜಮೀನಿನ ವಿವಾದವನ್ನು ಕಟಕಟೆಯಿಂದ ಆಚೆ ಇತ್ಯರ್ಥ ಪಡಿಸಿಕೊಳ್ಳಲು ಶ್ರೀಗಳು ಧಾರ್ಮಿಕ ಮುಖಂಡರ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ.

“ಈ ಒಂಬತ್ತು ಮಸೀದಿಗಳಲ್ಲದೇ ದೇಶದಲ್ಲಿ ಸಾಕಷ್ಟು ಮಸೀದಿಗಳನ್ನು ಇದೇ ರೀತಿ ನಿರ್ಮಾಣ ಮಾಡಲಾಗಿದ್ದು ಅವುಗಳನ್ನು ಹಿಂದುಗಳಿಗೆ ಮರಳಿಸಬೇಕಿದೆ” ಎಂದು ರಿಜ್ವಿ ಆಗ್ರಹಿಸಿದ್ದಾರೆ.

ದೇಶದ ಅತ್ಯಂತ ಪ್ರತಿಷ್ಠಿತ ಇಸ್ಲಾಮಿಕ್‌ ಬೋಧಕರಾಗಿರುವ ಮೌಲಾನಾ ನದ್ವಿರನ್ನು “ಅನ್ಯ ಧರ್ಮದ ಜಾಗದಲ್ಲಿ ನಿರ್ಮಿಸಲಾದ ಮಸೀದಿಯಲ್ಲಿ ನಮಾಝ್‌ ಮಾಡಿದರೆ ಅದನ್ನು ಒಪ್ಪುವಿರಾ” ಎಂದು ರಿಜ್ವಿ ಪ್ರಶ್ನಿಸಿದ್ದಾರೆ.

ವಿವಾದಿತ ಪ್ರದೇಶದ ನ್ಯಾಯಾಂಗ ಹೋರಟದಲ್ಲಿ ಭಾಗಿಯಾಗಿರುವ ಶಿಯಾ ಮಂಡಳಿ ಬಾಬ್ರಿ ಜಮೀನನ್ನು ರಾಮ ಜನ್ಮಭೂಮಿಗೆ ಬಿಟ್ಟುಕೊಟ್ಟು ಲಖನೌನ ಹುಸೇನಾಬಾದ್‌ನಲ್ಲಿ ಮಸೀದಿ ನಿರ್ಮಿಸಿಕೊಳ್ಳುವುದಾಗಿ ತಿಳಿಸಿತ್ತು.

Comments are closed.