ರಾಷ್ಟ್ರೀಯ

ಇಂಡಿಗೋ – ಗೋ ಏರ್‌ ಸಂಸ್ಥೆಯ 630 ವಿಮಾನ ರದ್ದು ! ಲಕ್ಷಾಂತರ ಪ್ರಯಾಣಿಕರಿಗೆ ಸಮಸ್ಯೆ

Pinterest LinkedIn Tumblr

ಮುಂಬಯಿ: ರಾಷ್ಟ್ರದ ವೈಮಾನಿಕ ಸೇವೆ ಪೈಕಿ ಪ್ರಮುಖ ಸಂಸ್ಥೆಗಳಾದ ಇಂಡಿಗೋ ಮತ್ತು ಗೋ ಏರ್‌ ಸುಮಾರು 630 ವಿಮಾನಗಳನ್ನು ಈ ತಿಂಗಳು ರದ್ದುಗೊಳಿಸಲಿದ್ದು, ಲಕ್ಷಾಂತರ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಇಂಡಿಗೋ 488 ವಿಮಾನಗಳನ್ನು, ಗೋ ಏರ್‌ 138 ವಿಮಾನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿವೆ.

ಗುರುವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ವಿಮಾನ ಸಂಸ್ಥೆಗಳು ಸಲ್ಲಿಸಿದ ವೇಳಾಪಟ್ಟಿಯಲ್ಲಿ ಸ್ಥಳೀಯ ವಿಮಾನಗಳ ರದ್ದತಿ ಬಗ್ಗೆ ತಿಳಿಸಲಾಗಿದೆ. ಸ್ಥಗಿತಗೊಳಿಸಲಾದ ವಿಮಾನಗಳ ವಿವರಗಳನ್ನು ಉಭಯ ವಿಮಾನ ಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ನೀಡಲಿವೆ. ಬದಲಿ ವ್ಯವಸ್ಥೆ ಮತ್ತು ರಿಫಂಡ್‌ ವ್ಯವಸ್ಥೆ ಕಲ್ಪಿಸುವುದಾಗಿ ಇಂಡಿಗೋ & ಗೋ ಏರ್‌ ಸಂಸ್ಥೆಗಳು ತಿಳಿಸಿವೆ.
ವಿಮಾನಗಳ ರದ್ದತಿಯಿಂದ ಮುಂದಿನ ತಿಂಗಳು ಬೇಸಿಗೆ ವೇಳಾಪಟ್ಟಿ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಇಂಡಿಗೋ ಮತ್ತು ಗೋ ಏರ್ ದಿನನಿತ್ಯ 1,200 ವಿಮಾನಗಳ ಹಾರಾಟ ನಡೆಸುತ್ತವೆ. ಯುರೋಪಿಯನ್‌ ಮತ್ತು ಭಾರತದ ವಾಯುಯಾನ ನಿಯಂತ್ರಕರು ಪ್ರಾಟ್ ಮತ್ತು ವಿಟ್ನಿ 1100 ಇಂಜಿನ್‌ಗಳನ್ನು ಹೊಂದಿರುವ ವಿಮಾನಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇಂಡಿಗೋ ವಿಮಾನ ರದ್ದತಿ: 488, ಮಾರ್ಚ್ 15 – 31
ಗೋಏರ್‌ ವಿಮಾನ ರದ್ದತಿ: 138, ಮಾರ್ಚ್ 15- 22

ಇಂಡಿಗೋ ದೈನಂದಿನ 36 ವಿಮಾನಗಳ ಹಾರಟವನ್ನು ಮಾರ್ಚ್ 15-21ರವರೆಗೆ ರದ್ದುಗೊಳಿಸಲಿದ್ದು, ಮಾರ್ಚ್ 22ರಿಂದ 24ರ ವರೆಗೆ 18, ಮಾರ್ಚ್ 25ರಿಂದ 31ರವರೆಗೆ 16 ವಿಮಾನಗಳನ್ನು ರದ್ದುಗೊಳಿಸಲಿದೆ. ಗೋ ಏರ್‌ ದೈನಂದಿನ 10 ವಿಮಾನಗಳ ಹಾರಾಟವನ್ನು ಮಾರ್ಚ್ 16-24ರವರೆಗೆ ರದ್ದುಗೊಳಿಸಲಿದೆ. ಮಾರ್ಚ್ 15ರಿಂದ 22ರವರೆಗೆ 6 ಸೇವೆಗಳನ್ನು ಸ್ಥಗಿತಗೊಳಿಸಲಿದೆ.

Comments are closed.