ಕೊಯಮತ್ತೂರು: ಕೆಲವೊಮ್ಮೆ ವಿಧಿಯಾಟ ಎಷ್ಟು ಕಠೋರವಾಗಿರುತ್ತದೆ ಎಂಬುದಕ್ಕೆ ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಕಣಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ತೆರಳಿದ್ದ ಡಿ ವಿಬಿನ್ ಮತ್ತು ದಿವ್ಯಾ ಅವರ ದುರಂತ ಪ್ರೇಮಕಥೆಯೇ ಸಾಕ್ಷಿ.
ಹೌದು ಕನ್ಯಾಕುಮಾರಿ ಮೂಲದ ಡಿ ವಿಬಿನ್ ಮತ್ತು ಕೊಯಮತ್ತೂರು ಮೂಲದ ದಿವ್ಯಾ ಇಬ್ಬರು ಟ್ರೆಕ್ಕಿಗಳು. ಟ್ರೆಕಿಂಗ್ ಗೆ ಹೋಗುವಾಗ ಇಬ್ಬರ ಮಧ್ಯೆ ಪರಿಚಯ ಬೆಳೆದಿದೆ. ನಂತರ ಪರಿಚಯ ಪ್ರೀತಿಗೆ ತಿರುಗಿ ಬಳಿಕ ಇಬ್ಬರು ಒಪ್ಪಿ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಎಂಬ ಬಂಧದೊಂದಿಗೆ ಸತಿ-ಪತಿಗಳಾಗಿದ್ದರು. ಆದರೆ ವಿಧಿಯಾಟ ಟ್ರೆಕ್ಕಿಂಗ್ ಮೂಲಕ ಶುರುವಾದ ಬಾಂಧವ್ಯ ಕೊನೆಗೆ ಟ್ರೆಕ್ಕಿಂಗ್ ನಲ್ಲೇ ದಾರುಣ ಅಂತ್ಯ ಕಂಡಿದೆ.
ಥೇಣಿಯ ಕುರಂಕಣಿ ಬೆಟ್ಟದಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿನಲ್ಲಿ ಡಿ ವಿಬಿನ್ ಸಜೀವ ದಹನವಾಗಿದ್ದು ದಿವ್ಯಾ ಶೇಕಡ 90ರಷ್ಟು ಸುಟ್ಟು ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಚೆನ್ನೈನ ಟ್ರೆಕ್ಕಿಂಗ್ ಗುಂಪಿನೊಂದಿಗೆ ದಿವ್ಯಾಗೆ ಒಡನಾಟವಿತ್ತು. ದಿವ್ಯಾ ಮತ್ತು ಆಕೆಯ ತಂಡ ಕೆಲವು ಅರಣ್ಯಗಳಲ್ಲಿ ಟ್ರೆಕ್ಕಿಂಗ್ ಸಂಘಟಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ದಿವ್ಯಾ ಖಾಸಗಿ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮದುವೆ ಬಳಿಕ ಪೋಷಕರೊಂದಿಗಿನ ವೈಮನಸ್ಸಿನಿಂದಾಗಿ ವಿಬಿನ್ ಜತೆ ಕಿನಾತುಕಡವು ನಲ್ಲಿ ಬೇರೆ ಮನೆ ಮಾಡಿಕೊಂಡಿದ್ದರು.
ಇವರಿಬ್ಬರು ಟ್ರೆಕ್ಕಿಂಗ್ ಗೆ ಹೋಗುತ್ತಿದ್ದದ್ದು ಇದೇ ಮೊದಲೇನಲ್ಲ. ಚೆನ್ನೈನ ತನ್ನ ತಂಡದೊಂಡಿಗೆ ಹಲವು ಬಾರಿ ದಂಪತಿಗಳು ಟ್ರೆಕ್ಕಿಂಗ್ ಗೆ ಹೋಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮಹಿಳಾ ದಿನ ಸಂಭ್ರಮಾಚರಣೆಗಾಗಿ ದಿವ್ಯಾ ಮತ್ತು ಆಕೆಯ ಸ್ನೇಹಿತೆ ನಿಶಾ ಇಬ್ಬುರ ಸೇರಿ ಕುರಂಕಣಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಅನ್ನು ಸಂಘಟಿಸಿದ್ದರು.
ಕರ್ನಾಟಕದ ಅರಣ್ಯಗಳಲ್ಲಿ ಟ್ರೆಕ್ಕಿಂಗ್ ಗೆ ನಿಷೇಧ
ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಕಣಿ ಬೆಟ್ಟದಲ್ಲಿ ಸಂಭವಿಸಿದ್ದ ಭಾರೀ ಕಾಡ್ಗಿಚ್ಚಿನಲ್ಲಿ 65 ಟ್ರೆಕ್ಕಿಗಳ ಮೂಲಕ 10 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಅರಣ್ಯಗಳಲ್ಲಿ ಟ್ರೆಕ್ಕಿಂಗ್ ಗೆ ನಿಷೇಧ ಹೇರಲಾಗಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆಗಳು ಇರುವುದರಿಂದ ಬೇಸಿಗೆ ಮುಗಿಯುವವರೆಗೆ ರಾಜ್ಯದ ಅರಣ್ಯಗಳಲ್ಲಿ ಟ್ರೆಕ್ಕಿಂಗ್ ಅನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.