ರಾಷ್ಟ್ರೀಯ

ವರ್ಷದ ಎಲ್ಲ ದಿನ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೇಂದ್ರ ಒಲವು

Pinterest LinkedIn Tumblr


ಹೊಸದಿಲ್ಲಿ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಕಾಯುತ್ತಿರುವ ಯುವ ಜನಾಂಗಕ್ಕೆ ಸಿಹಿ ಸುದ್ದಿ ಕಾಯ್ದಿದೆ.

18 ವರ್ಷ ತುಂಬಿದ ತರುವಾಯ, ವರ್ಷದ ಯಾವುದೇ ದಿನ ಮತದಾರರ ಪಟ್ಟಿ ಸೇರಲು ನಾಗರಿಕರಿಗೆ ಅನುವು ಮಾಡಿಕೊಡಲು ಸಾಧ್ಯವೇ ಎನ್ನುವ ಬಗ್ಗೆ ಪರಿಶೀಲಿಸಿ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕೇಂದ್ರ ಸರಕಾರ ಕೇಳಿದೆ.

ಸದ್ಯಚಾಲ್ತಿಯಲ್ಲಿರುವ ನಿಯಮದ ಪ್ರಕಾರ, ವರ್ಷದ ಜನವರಿ 1 ಅಥವಾ ಅದರೊಳಗೆ 18 ವರ್ಷಕ್ಕೆ ಪದಾರ್ಪಣೆಗೈಯ್ಯುವವರು ಮಾತ್ರ ವೋಟರ್‌ ಲಿಸ್ಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಜನವರಿ 1ರ ನಂತರ ಜನಿಸಿದವರು ಮುಂದಿನ ವರ್ಷದ ತನಕ ಕಾಯಬೇಕಾಗುತ್ತದೆ. ಇನ್ನೊಂದು ವಿಧದಲ್ಲಿ ಹೇಳಬೇಕೆಂದರೆ, ಈ ವರ್ಷ ಜನವರಿ 1ರ ನಂತರ 18ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ವ್ಯಕ್ತಿಗೆ ಈ ವರ್ಷ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಆತ/ಆಕೆ ಮುಂದಿನ ವರ್ಷದ ತನಕ ಕಾಯಲೇ ಬೇಕಾಗುತ್ತದೆ.

18ನೇ ವರ್ಷಕ್ಕೆ ಕಾಲಿಡುವವರಿಗೆ ಜನವರಿ 1, ಏಪ್ರಿಲ್‌ 1, ಜುಲೈ 1 ಹಾಗೂ ಅಕ್ಟೋಬರ್‌ 1 ಹೀಗೆ ವರ್ಷದಲ್ಲಿ ನಾಲ್ಕು ದಿನಗಳಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅವಕಾಶ ಮಾಡಿಕೊಡಬೇಕು ಎಂದು ಚುನಾವಣಾ ಆಯೋಗ 70ನೇ ದಶಕದ ಮಧ್ಯದಿಂದಲೂ ಪ್ರತಿಪಾದಿಸುತ್ತಲೇ ಬಂದಿತ್ತು. ಆದರೆ, ವರ್ಷದಲ್ಲಿ ಜನವರಿ 1 ಮತ್ತು ಜುಲೈ 1ರಂದು ಮಾತ್ರ ಹೆಸರು ನೋಂದಾಯಿಸಿಕೊಂಡರೆ ಒಳ್ಳೆಯದು ಎಂದು ಕಾನೂನು ಸಚಿವಾಲಯ 2016ರಲ್ಲಿ ಪ್ರಕಟಿಸಿತ್ತು. ಅಂತೆಯೇ ಚುನಾವಣಾ ನಿಯಮದ ತಿದ್ದುಪಡಿಗೆ ಈಗಾಗಲೇ ವಿಧೇಯಕ ಕೂಡ ಸಿದ್ಧಪಡಿಸಲಾಗಿದೆ.

ಆದರೆ, ಈಗ, ವರ್ಷದಲ್ಲಿ ಯಾವುದೇ ದಿನ 18ನೇ ವರ್ಷಕ್ಕೆ ಪದಾರ್ಪಣೆಗೈದರೂ ಅಂದು ಆತ/ಆಕೆ ತನ್ನ ಹೆಸರನ್ನು ವೋಟರ್‌ ಲಿಸ್ಟ್‌ಗೆ ಸೇರಿಸಲು ಅವಕಾಶ ಮಾಡಿಕೊಡಲು ಸಾಧ್ಯವೇ ಎಂದು ಚುನಾವಣಾ ಆಯೋಗಕ್ಕೆ ಕೇಂದ್ರ ಸರಕಾರ ಕೇಳಿಕೊಂಡಿರುವುದರಿಂದ, ಶೀಘ್ರದಲ್ಲೇ ಹೊಸ ಕಾನೂನು ಜಾರಿಗೆ ಬರುವ ಸಾಧ್ಯತೆಗಳು ದಟ್ಟವಾಗಿವೆ.

Comments are closed.