ರಾಷ್ಟ್ರೀಯ

ತನ್ನ ಎದೆಗೆ ಚೂರಿ ಚುಚ್ಚಿದ್ದರೂ ಎದೆಗುಂದದೆ ಬರಿಗೈನಲ್ಲೇ ನಕ್ಸಲರ ಜತೆ ಹೋರಾಡಿದ ಯೋಧ

Pinterest LinkedIn Tumblr

ನಾಗಪುರ: ಕಳೆದ ಕೆಲವು ದಿನಗಳಿಂದ ಮಾವೋವಾದಿಗಳ ಹಲವಾರು ಸುದ್ದಿ ಪ್ರಕಟಗೊಂಡಿವೆ. ಮಾವೋವಾದಿಗಳನ್ನು ಎದುರಿಸಿದ ಸಾಹಸಿ ಯೋಧನ ಕಥೆ ಇಲ್ಲಿದೆ ಓದಿ.

ಮಾವೋವಾದಿಗಳ ಉಪಟಳ ಹೆಚ್ಚಿರುವ ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 33 ವರ್ಷದ ಗೋಮ್ಜಿ ಮಟ್ಟಾಮಿಯೇ ಈ ಸಾಹಸಿ ಯೋಧ.

ಕಳೆದ ಭಾನುವಾರ ಮಾವೋವಾದಿಗಳು ಗೋಮ್ಜಿ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಕೆಚ್ಚೆದೆಯಿಂದ ಹೋರಾಡಿದ ಗೋಮ್ಜಿ ತನ್ನ ಎಕೆ 47 ರೈಫಲ್ ಉಳಿಸಿಕೊಂಡಿದ್ದು ಅಲ್ಲದೇ, ಮಾವೋವಾದಿಗಳನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಗೋಮ್ಜಿಯ ಆಕ್ರಮಣಕ್ಕೆ ಬೆದರಿದ ನಾಲ್ವರು ಮಾವೋವಾದಿಗಳು ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾರೆ.

ಗಾಯಗೊಂಡಿರುವ ಗೋಮ್ಜಿ ಸದ್ಯ ಆರೆಂಜ್‌ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟಾರೆಯ ಘಟನೆಯನ್ನು ವಿವರಿಸಿದ್ದಾರೆ.

ಅಂದು ನಡೆದಿದ್ದೇನು ಎಂಬುದನ್ನು ಗೋಮ್ಜಿ ಮಾತುಗಳಲ್ಲೇ ಕೇಳಿ….

ಕಳೆದ ವಾರ ಜಾಂಬಿಯ ಗಟ್ಟಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಗಾಗಿ ನಮ್ಮ ಬೆಟಾಲಿಯನ್‌ ಅನ್ನು ನಿಯೋಜಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಯಿತು.

ಆ ನಂತರ ನಮ್ಮ ಬೆಟಾಲಿಯನ್‌ ಸದಸ್ಯರೊಂದಿಗೆ ನಾವು ವಾಪಸ್‌ ಬರುತ್ತಿದ್ದೆವು. ಮಾರ್ಕೆಟ್‌ ಬಳಿ ಬಂದಾಗ ಸ್ನೇಹಿತನನ್ನು ಮಾತನಾಡಿಸಲು ನಾನು ನಿಂತುಕೊಂಡೇ, ಉಳಿದವರು ಮುಂದೆ ಹೆಜ್ಜೆ ಹಾಕಿದರು.

ಸ್ನೇಹಿತನ ಜತೆ ಮಾತುಕತೆ ನಂತರ ಮುಂದೆ ತೆರಳಿದೆ. ಎಡಗೈ ಪಾಕೆಟ್‌ನಲ್ಲಿ ನನ್ನ ಕೈ ಇಟ್ಟುಕೊಂಡಿದ್ದೇ. ಕೂಡಲೇ ಅದನ್ನು ಯಾರೋ ಎಳೆದರು. ಹಿಂದಿರುಗಿ ನೋಡಿದಾಗ ನಾಲ್ವರು ನನ್ನನ್ನು ಸುತ್ತುವರಿದರು. ಅದರಲ್ಲಿ ಒಬ್ಬ ಪಿಸ್ತೂಲು ತೆಗೆದು ಟ್ರಿಗರ್‌ ಒತ್ತಿದ. ಆದರೆ ಅದು ಸಿಡಿಯಲಿಲ್ಲ. ಎಲ್ಲವೂ ಒಂದು ಕ್ಷಣದಲ್ಲಿ ನಡೆದು ಹೋಯಿತು.

ನನ್ನ ಬಳಿ ಒಂದು ಎಕೆ 47 ರೈಫಲ್‌. 10 ಮ್ಯಾಗಜೈನ್‌ಗಳಿದ್ದವು. ಶಸ್ತ್ರಾಸ್ತ್ರಗಳನ್ನು ಉಳಿಸಿಕೊಳ್ಳುವುದು ನನ್ನ ಇರಾದೆಯಾಗಿತ್ತು. ಅವರು ನನ್ನನ್ನು ಹೊಡೆದುರುಳಿಸಿ ಶಸ್ತ್ರಾಸ್ತ್ರ ಕದ್ದೊಯ್ಯುವ ಗುರಿ ಇತ್ತು ಎಂಬುದು ನನಗೆ ಸ್ಪಷ್ಟವಾಯಿತು.

ಪಿಸ್ತೂಲ್‌ ಹಿಡಿದು ಕೊಂಡವನನ್ನು ಕಾಲಿನಿಂದ ಒದ್ದೆ. ಆಗ ಮತ್ತೊಬ್ಬ ಡ್ಯಾಗರ್ ತೆಗೆದು ಎದೆಗೆ ಇರಿದ. ಭಾರಿ ನೋವು ಉಂಟಾಯಿತು. ಜತೆಗೆ ಎಕೆ 47 ರೈಫಲ್‌ ಮೇಲೆ ನನ್ನ ಕೈ ಹಿಡಿತ ಕೂಡ ತಪ್ಪಿತು. ಕೂಡಲೇ ಮತ್ತೊಬ್ಬ ಅದನ್ನು ಕಸಿದಕೊಂಡು ಓಡಿದ. ರಕ್ತ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ನಾನು ಓಡಿ ಹೋಗಿ ಅವನನ್ನು ಹಿಡಿದು ಮುಖಕ್ಕೆ ಎರಡು ಪಂಚ್‌ ಕೊಟ್ಟು ರೈಫಲ್‌ ಮರಳಿ ಕಿತ್ತುಕೊಂಡೇ.

ಕೂಡಲೇ ರೈಫಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿದೆ. ಮಾರ್ಕೆಟ್‌ನಲ್ಲಿ ಬಹಳಷ್ಟು ಮಂದಿ ಇದ್ದಾಗ ಎಚ್ಚರದಿಂದ ನಾನು ಗುಂಡು ಹಾರಿಸಬೇಕಾಯಿತು. ಎರಡು ಸುತ್ತು ಗುಂಡು ಹಾರಿಸಿದ ಕೂಡಲೇ ಅವರೆಲ್ಲರೂ ಓಡಿ ಹೋದರು.

ಎಷ್ಟೇ ಗಾಯವಾಗಿದ್ದರೂ ನನ್ನ ಶಸ್ತ್ರಾಸ್ತ್ರಗಳನ್ನು ಉಳಿಸಿಕೊಂಡ ಸಮಾಧಾನ ಇದೆ.

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮದಾಸ್ಕ ಗ್ರಾಮದ ಗೋಮ್ಜಿ ಮಟ್ಟಾಮಿ ಈಗ ಚೇತರಿಸಿಕೊಂಡಿದ್ದಾನೆ. ಆತನ ಎದೆಗೆ ಡ್ರ್ಯಾಗರ್ ಇರಿತದಿಂದ ಸ್ವಲ್ಪ ಗಂಭೀರ ಸ್ಥಿತಿ ಇದೆ. ಆದರೆ ಎಲ್ಲ ಚಿಕಿತ್ಸೆಗೆ ಗೋಮ್ಜಿ ಸ್ಪಂದಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಗೋಮ್ಜಿ ಮಟ್ಟಾಮಿಯ ಈ ಸಾಹಸಕ್ಕೆ ಇಡೀ ಸೇನೆ ಹಾಗೂ ಪೊಲೀಸ್‌ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಶೌರ್ಯ ಪ್ರಶಸ್ತಿಗೂ ಇವರ ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ.

Comments are closed.