ರಾಷ್ಟ್ರೀಯ

ಎಸ್‌ಪಿ-ಬಿಎಸ್‌ಪಿ ಮೈತ್ರಿ ಹತಾಶೆಯಿಂದಾಗಿದೆ: ಬಿಜೆಪಿ

Pinterest LinkedIn Tumblr


ಲಖನೌ: ಉತ್ತರ ಪ್ರದೇಶದ ಫುಲ್ಪುರ ಹಾಗು ಗೋರಖ್‌ಪುರ ಲೋಕಸಭಾ ಕ್ಷೇತ್ರಗಳ ಚುನಾವಣೆಗೂ ಮುನ್ನ ಎಸ್‌ಪಿ ಹಾಗು ಬಿಎಸ್‌ ಪಿ ಮೈತ್ರಿ ಮಾಡಿಕೊಂಡಿರುವುದು ವೈಯಕ್ತಿಕ ಲಾಭಗಳಿಗಾಗಿ ಮಾಡಿಕೊಂಡಿರುವ ಡೀಲ್‌ ಆಗಿದೆ ಎಂದು ಬಿಜೆಪಿ ಆರೋಪಿಸಿದೆ.

ಎರಡೂ ಪಕ್ಷಗಳನ್ನು ಜನತೆ ನಿರಾಕರಿಸಿರುವ ಕಾರಣ ಈ ನಡೆಗೆ ಮುಂದಾಗಿವೆ ಎಂದು ಬಿಜೆಪಿ ಇದೇ ವೇಳೆ ತಿಳಿಸಿದೆ. ಆದರೆ ಮೈತ್ರಿ ಕುರಿತಂತೆ ಮಾತುಗಳನ್ನ ತಳ್ಳಿಹಾಕಿರುವ ಬಿಎಎಸ್‌ಪಿ ವರಿಷ್ಠೆ ಮಾಯಾವತಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ತಮ್ಮ ಪಕ್ಷದ ಕಾರ್ಯಕರ್ತರು ಶ್ರಮಿಸುವುದಾಗಿ ತಿಳಿಸಿದ್ದಾರೆ.

ಎರಡೂ ಕ್ಷೇತ್ರಗಳ ಬಿಎಸ್‌ಪಿ ಸ್ಥಳೀಯ ನಾಯಕರು ಎಸ್‌ಪಿ ಅಭ್ಯಥಿಗಳಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. “ಜನತೆಯಿಂದ ತಿರಸ್ಕರಿಸಲ್ಪಟ್ಟಿರುವ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈ ಡೀಲ್‌ ಕೇವಲ ವೈಯಕ್ತಿಕ ಕಾರಣಗಳಿಗೆ ಮಾತ್ರವೇ ಹೊರತು ಸಾಮಾನ್ಯ ಜನತೆಯ ಅನುಕೂಲಕ್ಕಲ್ಲ” ಎಂದು ಬಿಜೆಪಿ ಹಿರಿಯ ನಾಯಕ ಹಾಗು ಸಂಪುಟ ಸಚಿವ ಶ್ರೀಕಾಂತ್‌ ಶರ್ಮಾ ಹೇಳಿದ್ದಾರೆ.

ರಾಜ್ಯದ ಜನತೆ ರಾಜಕೀಯವಾಗಿ ಪ್ರಬುದ್ಧರಾಗಿದ್ದು ಎಸ್‌ಪಿ ಹಾಗು ಬಿಎಸ್‌ಪಿ ಪಕ್ಷಗಳ ಜಾತಿ ಹಾಗು ಕುಟುಂಬ ರಾಜಕಾರಣಗಳನ್ನು ತಿರಸ್ಕರಿಸುವುದಾಗಿ ಶರ್ಮಾ ತಿಳಿಸಿದ್ದಾರೆ.

“ಈ ಡೀಲ್‌ ವಿಧಾನ ಪರಿಷತ್‌ ಹಾಗು ರಾಜ್ಯ ಸಭಾ ಸೀಟುಗಳಿಗಾಗಿ ನಡೆದಿದೆ. ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಶರ್ಮಾ ಹೇಳಿದ್ದಾರೆ.

ಈ ಕುರಿತು ಮಾತನಾಡಿದ್ದ ಮಾಯಾವತಿ “ಫುಲ್ಪುರ ಹಾಗು ಗೋರಖ್ಪುರಗಳಲ್ಲಿ ಬಿಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.ನಮ್ಮ ಪಕ್ಷದ ಕರ್ಯಕರ್ತರು ಬಿಜೆಪಿ ವಿರುದ್ಧ ಗೆಲ್ಲಬಹುದಾದ ಅಭ್ಯರ್ಥಿಗೆ ಮತ ಹಾಕಲಿದ್ದಾರೆ” ಎಂದು ಮಾಯಾವತಿ ಹೇಳಿದ್ದರು.

ಅಲ್ಲದೇ ವಿಧಾನ ಪರಿಷತ್‌ ಹಾಗು ರಾಜ್ಯಸಭಾ ಸೀಟುಗಳ ವಿಚಾರದಲ್ಲಿ ಬಿಎಸ್‌ಪಿ ಹಾಗು ಎಸ್‌ಪಿ ಪರಸ್ಪರ ಸಹಾಯ ಮಾಡಿಕೊಳ್ಳಲಿವೆ ಎಂದು ಮಾಯಾವತಿ ತಿಳಿಸಿದ್ದರು.

ಕಳೆದ ವರ್ಷದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಬಳಿಕ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌ ಗೋರಖ್ಪುರ ಸಂಸದನ ಸ್ಥಾನ ತೊರೆದ ಬಳಿಕ ಹಾಗು ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್ ಮೌರ್ಯ ಫುಲ್ಪುರ ಸಂಸದನ ಸ್ಥಾನ ತ್ಯಜಿಸಿದ ಬಳಿಕ ತೆರವಾದ ಸ್ಥಾನಗಳಿಗೆ ಮಾರ್ಚ್‌ 11ರಂದು ಉಪ ಚುನಾವಣೆ ನಡೆಯಲಿದೆ.

Comments are closed.