ರಾಷ್ಟ್ರೀಯ

ಜಿನ್ನಾ ಪ್ರತ್ಯೇಕ ರಾಷ್ಟ್ರ ಬಯಸಿರಲಿಲ್ಲ: ಫಾರೂಕ್ ಅಬ್ದುಲ್ಲಾ

Pinterest LinkedIn Tumblr


ಜಮ್ಮು: ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರವನ್ನು ಮೊಹಮ್ಮದಾಲಿ ಜಿನ್ನಾ ಬಯಸಿರಲಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್‌ ವರಿಷ್ಠ ಫಾರೂಕ್ ಅಬ್ದುಲ್ಲಾ ಹೇಳಿಕೊಂಡಿದ್ದಾರೆ. ದೇಶದಲ್ಲಿ ಮುಸ್ಲಿಮರು ಮತ್ತು ಸಿಖ್ಖರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಭಾರತೀಯ ನಾಯಕರು ಒಪ್ಪದ ಕಾರಣ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಯಿತು ಎಂದು ಫಾರೂಕ್ ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.

‘ದೇಶ ವಿಭಜನೆಯನ್ನು ಜಿನ್ನಾ ಬಯಸಿರಲಿಲ್ಲ. ದೇಶ ವಿಭಜನೆಯ ನಿರ್ಧಾರವನ್ನು ಭಾರತೀಯ ಮುಖಂಡರೇ ಕೈಗೊಂಡರು. ಮುಸ್ಲಿಮರಿಗೆ ವಿಶೇಷ ಪ್ರಾತಿನಿಧ್ಯವನ್ನು ಕೇಳಲಾಗಿತ್ತು. ಅಲ್ಪಸಂಖ್ಯಾತರು ಮತ್ತು ಸಿಖ್ಖರಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಕೇಳಲಾಗಿತ್ತು. ಆದರೆ ದೇಶ ವಿಭಜನೆಯನ್ನು ಕೇಳಿರಲಿಲ್ಲ’ ಎಂದು ಶೇರ್‌-ಇ- ಕಾಶ್ಮೀರ ಭವನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ನುಡಿದರು.

ರಾಜಕೀಯ ಮುಖಂಡರಾದ ಜವಾಹರಲಾಲ್ ನೆಹರೂ, ಮೌಲಾನಾ ಆಜಾದ್‌ ಮತ್ತು ಸರ್ದಾರ್ ಪಟೇಲ್‌ ಪ್ರತ್ಯೇಕ ಆಯೋಗ ಸ್ಥಾಪನೆ ಬೇಡಿಕೆಯನ್ನು ತಿರಸ್ಕರಿಸಿದರು. ಹೀಗಾಗಿ ಜಿನ್ನಾ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯಿಟ್ಟರು ಎಂದು ಫಾರೂಕ್ ಅಬ್ದುಲ್ಲಾ ನುಡಿದರು.

‘ಜಿನ್ನಾ ಒಪ್ಪಿದ್ದರು. ಆದರೆ ನೆಹರೂ, ಆಜಾದ್‌ ಮತ್ತು ಪಟೇಲರು ಒಪ್ಪಲಿಲ್ಲ. ಹೀಗಾಗಿ ಜಿನ್ನಾ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯಿಟ್ಟರು. ಒಂದು ವೇಳೆ ಅಂದು ಪ್ರತ್ಯೇಕ ಕಮಿಷನ್‌ನ ಬೇಡಿಕೆಯನ್ನು ಭಾರತೀಯ ನಾಯಕರು ಒಪ್ಪಿದ್ದರೆ ಇಂದು ಪ್ರತ್ಯೇಕ ಪಾಕಿಸ್ತಾನವೂ ಇರುತ್ತಿರಲಿಲ್ಲ, ಪ್ರತ್ಯೇಕ ಬಾಂಗ್ಲಾದೇಶವೂ ಇರುತ್ತಿರಲಿಲ್ಲ. ಅಖಂಡ ಭಾರತ ಮಾತ್ರ ಇರುತ್ತಿತ್ತು’ ಎಂದು ಫಾರೂಕ್ ನುಡಿದರು.

ಚುನಾವಣೆ ಲಾಭಕ್ಕಾಗಿ ಧರ್ಮದ ದುರ್ಬಳಕೆ ಮಾಡುವುದನ್ನೂ ಅವರು ಟೀಕಿಸಿದರು.

ದೇಶ ವಿಭಜನೆ ಕುರಿತ ಅಬ್ದುಲ್ಲಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, ನ್ಯಾಷನಲ್ ಕಾನ್ಫರೆನ್ಸ್‌ ನಾಯಕರು ಇತಿಹಾಸವನ್ನು ಮತ್ತೊಮ್ಮೆ ಓದಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಕೈಬಿಟ್ಟರೆ ಅಖಂಡ ಭಾರತದ ಪ್ರಧಾನಿಯಾಗಿ ಜಿನ್ನಾ ಅವರನ್ನೇ ಒಪ್ಪಿಕೊಳ್ಳುವಂತೆ ಕಾಂಗ್ರೆಸ್‌ಗೆ ಒತ್ತಡ ಹೇರುವುದಾಗಿ ಸ್ವತಃ ಮಹಾತ್ಮಾ ಗಾಂಧೀಜಿಯವರೇ ಜಿನ್ನಾಗೆ ಹೇಳಿರುವುದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಸಿಂಗ್‌ ತಿಳಿಸಿದರು.

Comments are closed.