ತಿರುವನಂತಪುರಂ: ಮಗುವಿಗೆ ಎದೆಹಾಲು ಉಣಿಸುವ ನಟಿಯ ಚಿತ್ರವೊಂದನ್ನು ಮಲಯಾಳಂ ನಿಯತಕಾಲಿಕೆಯೊಂದು ಮುಖಪುಟದಲ್ಲಿ ಬಳಸಿಕೊಂಡಿರುವ ಪರಿ ಕಾಮೋತ್ತೇಜಕವಾಗಿದೆ ಎಂದು ನಿಯತಕಾಲಿಕೆಯ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಕಾಮ ಪ್ರಚೋದಿಸುವಂಥ ಚಿತ್ರ ಬಳಸುವ ಮೂಲಕ ಸ್ತ್ರೀತನದ ಗೌರವಕ್ಕೆ ಚ್ಯುತಿ ತರಲಾಗಿದೆ ಎಂದು ಆರೋಪಿಸಿ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ, 1986ರ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಕೇರಳದ ವಕೀಲ ವಿನೋದ್ ಮ್ಯಾಥ್ಯೂ ವಿಲ್ಸನ್ ದೂರು ನೀಡಿದ್ದಾರೆ.
ನಟಿ ಹಾಗೂ ಲೇಖಕಿ ಗಿಲು ಜೋಸೆಫ್ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸೀರೆ, ಸಿಂಧೂರ, ತಾಳಿ ಧರಿಸಿ ಮಗುವಿಗೆ ಎದೆ ಹಾಲು ಕುಡಿಸುತ್ತಿರುವ ಚಿತ್ರವಿದು. ಅಲ್ಲದೆ, ‘ಕೇರಳಕ್ಕೆ ತಾಯಂದಿರು ಹೇಳುತ್ತಾರೆ, ದೃಷ್ಟಿಸಿ ನೋಡದಿರಿ ಸ್ತನ್ಯಪಾನ ನಮಗೆ ಅಗತ್ಯವಿದೆ’ ಎಂದು ಚಿತ್ರದೊಂದಿಗೆ ಒಕ್ಕಣೆ ಇದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ಜೋಸೆಫ್, ಈ ಮುಖಪುಟ ಚಿತ್ರವನ್ನು ಅನೇಕರು ಇಷ್ಟಪಡದೆ ಇರಬಹುದು. ಆದರೆ, ಈ ಚಿತ್ರ ದೇಶದ ಎಲ್ಲ ತಾಯಿಯರಿಗೆ ನೀಡುತ್ತಿರುವ ಸಂದೇಶ. ಯಾರು ಏನೆಂದುಕೊಳ್ಳುತ್ತಾರೆ ಎಂಬ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಗುವಿಗೆ ಎದೆಹಾಲು ಉಣಿಸಿ ಎಂದು ಹೇಳುವ ಸಂದೇಶವನ್ನು ಈ ಚಿತ್ರ ಸಾರುತ್ತದೆ ಎಂದಿದ್ದಾರೆ.
ನಿಯತಕಾಲಿಕ ಕೀಳು ಅಭಿರುಚಿಯ ಮೂಲಕ ಪ್ರಸರಣ ಹೆಚ್ಚಿಸುವ ಕಸರತ್ತು ಮಾಡುತ್ತಿದೆ ಎಂದು ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಜರಿದರೆ, ಎದೆಹಾಲು ಉಣಿಸುವ ವಿಷಯದಲ್ಲಿ ಇದೊಂದು ಐತಿಹಾಸಿಕ ಪ್ರಯತ್ನ ಎಂದು ಬಣ್ಣಿಸಿದ್ದಾರೆ.